ಕರಾವಳಿ

ಶೀರೂರು ಶ್ರೀಗಳ ನಿಧನ ಹಿನ್ನೆಲೆ; 8 ಶ್ರೀಗಳ ಮೇಲಿನ ಕೇವಿಯಟ್ ಮುಕ್ತಾಯ

Pinterest LinkedIn Tumblr

ಉಡುಪಿ: ಪಟ್ಟದ ದೇವರನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿ ಆರು ಮಠಗಳ ಎಂಟು ಮಠಾಧೀಶರ ವಿರುದ್ದ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಮುಕ್ತಾಯಗೊಂಡಿದೆ. ಉಡುಪಿಯ ಸಿವಿಲ್ ಜಡ್ಜ್ ಜ್ಯೂನಿಯರ್ ಡಿವಿಶನ್ ಹಾಗೂ ಸೀನಿಯರ್ ಡಿವಿಶನ್ ಎರಡು ನ್ಯಾಯಾಲಯದಲ್ಲಿ ಶೀರೂರು ಶ್ರೀಗಳು ಜುಲೈ 4 ರಂದು ಕೇವಿಯಟ್ ಸಲ್ಲಿಸಿದ್ದರು.

ಎದ್ರಿದಾರರು ತನ್ನ ವಿರುದ್ಧ ಯಾವುದಾದರೂ ದಾವೆ ಹೂಡಿದಲ್ಲಿ ಏಕಪಕ್ಷೀಯವಾಗಿ ಯಾವುದೇ ಮದ್ಯಂತರ ಆದೇಶವನ್ನು ಮಾಡಬಾರದು ಎನ್ನುವ ಉದ್ದೇಶಕ್ಕೆ ಕೇವಿಯಟ್ ದಾಖಲು ಮಾಡಿದ್ದು ಸದ್ಯ ಶ್ರೀಗಳು ವಿಧಿವಶರಾಗಿದ್ದಾರೆ. ಕೇವಿಯಟ್‌ಗೆ ೯೦ ದಿನಗಳ ಕಾಲಾವಕಾಶವಿದ್ದು ಕೇವಿಯಟ್ ಹಾಕಿದವರು ಮೃತಪಟ್ಟಾಗ ಅಥವಾ ಇಲ್ಲದಿದ್ದಾಗ ಅದು ಮುಕ್ತಾಯಗೊಳ್ಳುವುದು ಸಹಜ ಕಾನೂನು ಪ್ರಕ್ರಿಯೆಯಾಗಿದೆ ಎಂದು ಶ್ರೀಗಳ ಪರ ವಕೀಲ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ್ ಕುಂದಾಪುರದಲ್ಲಿ ಮಾಹಿತಿ ನೀಡಿದ್ದಾರೆ. ಕೇವಿಯಟ್ ಎನ್ನುವುದು ತನ್ನ ಎದುರಾಳಿಗಳು ಯಾರು? ಪರಿಸ್ಥಿತಿಯ ಕುರುಹುಗಳನ್ನು ನೀಡಲಿದೆ. ಪ್ರಕರಣದ ತನಿಖೆಯಲ್ಲಿ ತನಿಖಾಧಿಕಾರಿಗಳಿಗೆ ಕೇವಿಯಟ್ ಕೆಲವು ಮಾಹಿತಿ ನೀಡುತ್ತದೆಂದು ಈ ಸಂದರ್ಭ ಹೇಳಿದರು.

(ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಜೊತೆ ಶೀರೂರು ಶ್ರೀಗಳು ಹಾಗೂ ಕೇಮಾರು ಶ್ರೀಗಳು- ಜೂ.28-2018)

ಶೀರೂರು ಶ್ರೀಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಲಾತವ್ಯ ಆಚಾರ್ಯ ಅವರು ನೀಡಿದ ದೂರಿನನ್ವಯ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಸದ್ಯ ಅಸ್ವಭಾವಿಕ ಮರಣದ ಬಗ್ಗೆ ವರದಿ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಸತ್ಯತೆ ತಿಳಿಯುತ್ತದೆ. ವೈದ್ಯರು ರಕ್ತದಲ್ಲಿ ವಿಷಕಾರಿ ಅಂಶವಿದೆಯೆಂದು ಹೇಳಿದ್ದು ಒಂದೊಮ್ಮೆ ಶ್ರೀಗಳಿಗೆ ವಿಷಪ್ರಾಶನವಾಗಿದ್ದರೆ ಎಫ್.ಐ.ಆರ್ ದಾಖಲಾಗಿ ಪ್ರಕರಣದ ತನಿಖೆ ನಡೆಯುತ್ತದೆ. ಪ್ರಕರಣವು ಮರಣೋತ್ತರ ವರದಿಯನ್ನು ಆಧರಿಸಿರುವುದರಿಂದ ಅದಕ್ಕಾಗಿ ಕಾಯಲೇಬೇಕಿದೆ ಎಂದರು.

Comments are closed.