ಕರಾವಳಿ

ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ : ಮಾರುಕಟ್ಟೆ ಅಭಿವೃದ್ಧಿಯ ಭರವಸೆ

Pinterest LinkedIn Tumblr

ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮಂಗಳೂರಿನ ಹೃದಯಭಾಗದಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುವ ಸ್ಟೇಟ್ ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅಲ್ಲಿನ ಮೀನುಗಾರ ಮಹಿಳೆಯರು ವ್ಯಾಪಾರಿಗಳ ಪರವಾಗಿ ಶಾಸಕರಿಗೆ ಹೂಹಾರ ಹಾಕಿ ಅಭೂತಪೂರ್ವವಾಗಿ ಸ್ವಾಗತಿಸಿದರು. ನಂತರ ಮೀನು ಮಾರುಕಟ್ಟೆಯ ಅಭಿವೃದ್ಧಿಯ ಬಗ್ಗೆ ಮನವಿ ಮಾಡಿದ ಮೊಗವೀರ ಮಹಿಳೆಯರು ಈ ಮಾರುಕಟ್ಟೆ ಸ್ಥಳಾಂತರವಾಗುತ್ತಿದೆ ಎನ್ನುವ ವದಂತಿ ಕೇಳಿಬರುತ್ತಿದೆ. ಈ ಮಾರುಕಟ್ಟೆಗೂ ತಮಗೂ ಭಾವನಾತ್ಮಕ ಸಂಬಂಧವಿದೆ. ಇದನ್ನು ಅಭಿವೃದ್ಧಿ ಪಡಿಸಿ ತಮಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಮೇಲ್ಛಾವಣಿ ಸೋರಿ ಮಳೆಗಾಲದಲ್ಲಿ ನೀರು ಒಳಗೆ ಬೀಳುತ್ತದೆ. ಇದರಿಂದ ವ್ಯಾಪಾರಕ್ಕೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಇನ್ನು ಶೌಚಾಲಯದ ವ್ಯವಸ್ಥೆ ಕೂಡ ಉತ್ತಮ ರೀತಿಯಲ್ಲಿ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು. ಎಲ್ಲರ ಮನವಿಗಳನ್ನು ಆಲಿಸಿದ ನಂತರ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮಾರುಕಟ್ಟೆಯ ವಿಚಾರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಚರ್ಚಿಸಿ ಇಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಶಾಸಕನ ನೆಲೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಇಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಮೀರಾ ಕರ್ಕೇರಾ, ಮಾಜಿ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಮುಖಂಡರಾದ ವಸಂತ ಜೆ ಪೂಜಾರಿ, ಹಸಿ ಮೀನು ಮಾರಾಟಗಾರರಾದ ಪೂರ್ಣಿಮಾ, ಬೇಬಿ ಅಮೀನ್, ಗೌರಿ ಖಾರ್ವಿ, ಕಲಾವತಿ ಮೆಂಡನ್ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟು ಗೀತಾಭಾಯಿ ಉಪಸ್ಥಿತರಿದ್ದರು.

Comments are closed.