ಕರಾವಳಿ

ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆ ಇಲಾಖೆಯದ್ದು :ಸಚಿವೆ ಡಾ ಜಯಮಾಲಾ

Pinterest LinkedIn Tumblr

ಮಂಗಳೂರು ಜುಲೈ 26 : ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು; ಸಂಬಂಧಪಟ್ಟ ಅಧಿಕಾರಿಗಳು ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಡಾ ಜಯಮಾಲಾ ಹೇಳಿದರು.

ಅವರು ಜಿಲ್ಲಾ ಪಂಚಾಯತ್‍ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಪ್ರಗತಿಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿ, ಇಲಾಖೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಅನುದಾನದ ಸದ್ಬಳಕೆಯಾಗಬೇಕು ‘ಸಮುದ್ರಕ್ಕೆ ಹಾಕಿದರೂ ಅಳೆದು ಹಾಕಬೇಕಾಗುತ್ತದೆ’ ಅನುದಾನ ವಿನಿಯೋಗದ ವೇಳೆ ವಿಶೇಷ ಗಮನಹರಿಸಿ. ಎಲ್ಲ ಕಾರ್ಯಕ್ರಮಗಳ ಡಾಕ್ಯುಮೆಂಟೇಷನ್ ಮಾಡಿ ಎಂದು ಸಚಿವರು ಹೇಳಿದರು.

ಜಿಲ್ಲೆಯ ಕಲಾವಿದರ, ಕಲಾತಂಡಗಳ ಹಾಗೂ ಇಲಾಖೆಯ ನೆರವು ಪಡೆಯುತ್ತಿರುವವರ ಸಮಗ್ರ ಪಟ್ಟಿಯನ್ನು ನೀಡಿ ಎಂದ ಅವರು, ಪ್ರಾಯೋಜಿತ ಕಾರ್ಯಕ್ರಮಗಳು ಹಾಗೂ ಪ್ರೋತ್ಸಾಹ ಪಡೆಯುತ್ತಿರುವ ಕಲಾತಂಡಗಳ ಮಾಹಿತಿ ನೀಡಿ. ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಜಯಂತಿಗಳ ಬಗ್ಗೆ ಸಮಗ್ರ ವರದಿಯನ್ನು ತಕ್ಷಣವೇ ನೀಡಲು ಸಚಿವರು ಸೂಚಿಸಿದರು.

ಶಾಸ್ತ್ರೀಯ ಸಂಗೀತ, ಯಕ್ಷಗಾನದ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ ಎಂದ ಸಚಿವರು, ಕಾರ್ಯಕ್ರಮ ಆಯೋಜನೆಯ ಪರಿಕಲ್ಪನೆ ವಿಸ್ತಾರವಾಗಿರಲಿ ಎಂಬ ಸಲಹೆ ನೀಡಿದರು.

ಜಿಲ್ಲೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ರಂಗಮಂದಿರಕ್ಕೆ ನೀಲನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರು ಸ್ಮಾರಕ ಭವನಕ್ಕೂ ಅನುದಾನದ ಕೊರತೆ ಇಲ್ಲ; ಅಬ್ಬಕ್ಕ ಭವನಕ್ಕೆ 8ಕೋಟಿ 5ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಕ್ಕೆ ನೀಲನಕ್ಷೆ ಯನ್ನು ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಕೋರಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.

ಭವನಗಳ ನಿರ್ಮಾಣ ಉದ್ದೇಶ ಹಾಗೂ ಪರಿಕಲ್ಪನೆಯನ್ನು ವಿವರಿಸುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸಚಿವರು ಸೂಚನೆ ನೀಡಿದರು.

ತುಳುಭವನ ಈಗಾಗಲೇ 4ಕೋಟಿ 8ಲಕ್ಷ ರೂ. ಅನುದಾನದಲ್ಲಿ ಶೇ. 80ರಷ್ಟು ಕೆಲಸ ಪೂರ್ಣಗೊಂಡಿದ್ದು, ಸಂಪೂರ್ಣಗೊಳಿಸಲು ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Comments are closed.