ಮಂಗಳೂರು : ಗುಜ್ಜರಕೆರೆಯನ್ನು ಅಭಿವೃದ್ಧಿಪಡಿಸಿ ನವೆಂಬರ್ ಒಳಗೆ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ರಾಜ್ಯ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ, ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರಗಳೊಂದಿಗೆ ಮತ್ತು ಪಾಲಿಕೆಯ ಜನಪ್ರತಿನಿಧಿಗಳೊಂದಿಗೆ ಗುಜ್ಜರಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕರು ಗುಜ್ಜರಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎನ್ನುವ ಗುರಿ ಇದೆ. ಇಲ್ಲಿರುವ ಮುಖ್ಯ ಸಮಸ್ಯೆ ಏನೆಂದರೆ ಡ್ರೈನೇಜ್ ನೀರು ಕೆರೆಗೆ ಸಂಪರ್ಕಗೊಂಡಿರುವುದು. ಆದ್ದರಿಂದ ಇದನ್ನು ಮೊದಲು ಸರಿಮಾಡಲು ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದ್ದೇನೆ.
ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕೂಡ ಆಗಬೇಕಾದ ಕಾರ್ಯಗಳನ್ನು ತ್ವರಿತಗೊಳಿಸಲು ಹೇಳಿದ್ದೇನೆ. ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ 15 ರ ಒಳಗೆ ಗುಜ್ಜರಕೆರೆಯನ್ನು ಜನರಿಗೆ ಪ್ರವಾಸಿತಾಣವನ್ನಾಗಿ ಮಾಡಿಕೊಡಲು ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ ಎಂದು ಹೇಳಿದರು.
ಕೆರೆಯ ಸುತ್ತಲೂ ವಾಕಿಂಗ್ ಟ್ರಾಕ್ ಮಾಡುವ ಮೂಲಕ ಈ ಭಾಗದ ಜನರಿಗೆ ಇದು ಅನುಕೂಲಕರವಾಗಲಿದೆ. ಮಳೆಯ ನೀರು ಕೂಡ ಯಾವುದೇ ಕಾರಣಕ್ಕೂ ಕೆರೆಗೆ ಸೇರದಂತೆ ತಡೆಯಲು ಗಮನ ನೀಡಲಾಗುವುದು. ಇನ್ನು ಸಣ್ಣ ನೀರಾವರಿ ಇಲಾಖೆಯವರು, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಎನ್ ಐಟಿಕೆ ತಜ್ಞರ ಅಭಿಪ್ರಾಯ ಪಡೆದು ಕೆರೆಯಲ್ಲಿ ಗಿಡಗಳು ಬೆಳೆಯದಂತೆ ಅದಕ್ಕೆ ಶಾಶ್ವತ ಪರಿಹಾರ ಮಾಡಲಿದ್ದಾರೆ ಎಂದರು.
ಪಾಲಿಕೆಯ ಪ್ರತಿಪಕ್ಷ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸದಸ್ಯರಾದ ದಿವಾಕರ್, ರತಿಕಲಾ, ಬಿಜೆಪಿಯ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಸಂತ ಜೆ ಪೂಜಾರಿ, ಸುಮನ ಶರಣ್, ಯೋಗೀಶ್ ಕುಮಾರ್ ಜೆಪ್ಪು, ಹೇಮು ಕೊಟ್ಟಾರಿ, ಅನಿಲ್ ರಾವ್ ಮತ್ತು ಗುಜ್ಜರಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.
Comments are closed.