ಕರಾವಳಿ

ಅಷಾಢ ತಿಂಗಳಲ್ಲಿ ಆಚರಿಸುವ “ಆಟಿ ಅಮಾವಾಸ್ಯೆ”ಯ ವಿಶೇಷತೆ ಬಗ್ಗೆ ತಿಳಿಯಿರಿ….!

Pinterest LinkedIn Tumblr

ಆಟಿ ಆಚರಣೆಯಲ್ಲಿ ಆರೋಗ್ಯ ಮತ್ತು ನೆಮ್ಮದಿಯ ಹಿನ್ನೆಲೆಯಿದೆ ಇದು ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿದೆ ಸಂಸ್ಕೃತಿ,ಆಚಾರ,ವಿಚಾರಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಮ್ಮ ತುಳುವನಾಡು ಹಲವಾರು ಆಚರಣೆಗಳಿಗೆ ಪ್ರಸಿದ್ಧಿ. ಇಲ್ಲಿನ ಪ್ರತಿಯೊಂದು ಜಾನಪದ ಆಚರಣೆಗಳಿಗೆ ಅದರದೇ ಆದ ಮಹತ್ವವಿದೆ… ಪ್ರತೀ ಆಚರಣೆಗಳ ಹಿಂದೆಯೂ ಒಂದೊಳ್ಳೆ ಉದ್ದೇಶ ಅಡಕವಾಗಿರುತ್ತದೆ…. ಪ್ರಮುಖವಾಗಿ ಪರಿಸರ, ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟ ಕಾಳಜಿ ಕಾಣಬಹುದು….ಅದಕ್ಕೆ ಪುಷ್ಟಿ ಎಂಬಂತಿದೆ ಆಟಿ ತಿಂಗಳಿನಲ್ಲಿ ನಡೆಯುವ ಆಟಿ ಅಮಾವಾಸ್ಯೆ ಎಂಬ ಆಚರಣೆ….ತುಳುನಾಡಿನಲ್ಲಿ ನಡೆಯುವ ಆಟಿ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೆ. ತುಳುನಾಡಿನ ಜನರು ಸೌರಮಾನ ಪಂಚಾಂಗವನ್ನು ಅನುಸರಿಸುವುದರಿಂದ, ಉಳಿದ ಪ್ರದೇಶಗಳಲ್ಲಿ ಈಗ ಶ್ರಾವಣದ ಸಂಭ್ರಮವಾದರೆ ಕರಾವಳಿಗೆ ಮಾತ್ರ ಆಷಾಢದ ಸಂಭ್ರಮ.

ಆಟಿಯಲ್ಲಿ ಏಳು ದಿನಗಳು ಹೋಗುವಂದು ಆಟಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಆಟಿ ತಿಂಗಳಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಮವಾಸ್ಯೆಯಂದು ಸಾಮೂಹಿಕವಾಗಿ ಹಾಳೆ ಮರದ ತೊಗಟೆಯ ಕಷಾಯ ಸೇವಿಸುವುದು ಹಿಂದಿನಿಂದಲೂ ಬೆಳೆದು ಬಂದಂತಹ ಪದ್ಧತಿ. ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ತೊಗಟೆಯ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸರ್ವರೋಗ ನಿವಾರಕ ಔಷಧಿ ಗುಣ ಸಮೃದ್ಧವಾಗಿರುವ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವರ್ಷಪೂರ್ತಿ ಆರೋಗ್ಯವಂತರಾಗಿರಬಹುದೆಂಬ ನಂಬಿಕೆ ತುಳುವರದ್ದು. ಇದಾದ ಬಳಿಕ ಮೆಂತ್ಯೆ ಗಂಜಿಯನ್ನೂ ಸೇವಿಸಲಾಗುತ್ತದೆ. ಇನ್ನು ರಾಹುಗುಳಿಗ ದೈವಗಳಿಗೆ ಸೆರ್ಪಡೆಗೊಂಡ ಪ್ರೇತಗಳಿಗೆ ಪಣಿಯಾರ ನೀಡುವ ಪದ್ದತಿ ಕೂಡ ನಡೆದುಬಂದಿದೆ. ಈ ಮೂಲಕ ನಮ್ಮನ್ನಗಲಿದ ಹಿರಿಯರನ್ನು ನೆನಪಿಸುವ ಕಾರ್ಯ ಮಾಡಲಾಗುತ್ತದೆ

ಆಟಿ ತಿಂಗಳು ಅಂದರೆ ಆಟಿಕಲೆಂಜ ಇರಲೇಬೇಕು. ಒಂದು ಕಾಲದಲ್ಲಿ ತುಳುನಾಡಿನ ಆಟಿ ತಿಂಗಳು ಅಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ. ಹಾಗಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಒಂದು ರೀತಿಯ ತಟಸ್ಥ ಜೀವನ. ಈ ರೀತಿಯ ತಟಸ್ಥತೆಯ ಜೀವನದಲ್ಲಿ ಉಲ್ಲಾಸ ಬರಲು ಚೆನ್ನೆಮನೆಯಂತಹ ಒಳಾಂಗಣ ಆಟ ಆಡುತ್ತಿದ್ದರು. ಹೊರಗೆ ಯಾವುದೇ ಪದಾರ್ಥ ದೊಯದಿರುವ ಕಾರಣ ಬೇಸಿಗೆಯಲ್ಲಿ ಹಲಸಿನ ಕಾಯಿಯನ್ನು ಉಪ್ಪಲ್ಲಿ ಹಾಕಿ ಇಡುವ ಕ್ರಮ ಇತ್ತು ಅದಕ್ಕೆ ಉಪ್ಪಡಚ್ಚಿಲ್ ಹೇಳುತ್ತಿದ್ದರು. ಅದೇ ರೀತಿ ಹಲಸಿನ ಬೀಜ ಬೇಯಿಸಿ ಒಣಗಿಸಿ ಅದನ್ನು ಮಳೆಗಾಲಕ್ಕೆ ಸಂಗ್ರಹಣೆ ಮಾಡುತ್ತಿದ್ದರು. ಅದಕ್ಕೆ ಸಾಂತಾನಿ ಅಂತ ಹೇಳುತ್ತಿದ್ದರು. ಅದಲ್ಲದೆ ಹಲಸಿನ ಹಣ್ಣಿನ ಹಪ್ಪಳ ಇತ್ಯಾದಿ ಪದಾರ್ಥಗಳು ಆಟಿತಿಂಗಳ ಬೇಸರ ಕಳೆಯಲು ಅಥವಾ ತಿನ್ನಲು ಉಪಯೋಗಿಸುತ್ತಿದ್ದರು.

ಆಟಿ ತಿಂಗಳು ಅಂತ ಹೇಳಿ ಆಟಿಕಲೆಂಜನನ್ನು ಮರೆಯುವುದು ಹೇಗೆ ?. ಮಳೆಗಾಲದಲ್ಲಿ ವಿಪರೀತ ಮಳೆ ಬಂದು ಕ್ರಿಮಿ ಕೀಟಗಳ ಸಂತತಿ ಜಾಸ್ತಿ ರೋಗ ರುಜಿನಗಳು ಬರುತ್ತಿತ್ತು. ಇಂತಹ ರೋಗ ರುಜಿನಗಳನ್ನು ದೂರ ಮಾಡಲು ದೇವರ ಪ್ರತಿನಿಧಿಯಾಗಿ ಆಟಿಕಲೆಂಜ ಊರಲ್ಲಿ ಸುತ್ತಿ ಊರಿಗೆ ಬಂದ ಮಾರಿಯನ್ನು ಓಡಿಸುವುದೇ ಆಟಿಕಲೆಂಜನ ಉದ್ದೇಶ. ಹಾಗಾಗಿ ಕಲೆಂಜನು ದೋಷ ನಿವಾರಣೆಗಾಗಿ ಮನೆ ಮನೆಗೆ ತಿರುಗುತ್ತಾ ದೋಷ ನಿವಾರಣೆ ಮಾಡುವ ಪದ್ದತಿ ಹಿಂದೆ ಇತ್ತು. ಕಲೆಂಜ ಪ್ರದರ್ಶನ ಸಂದರ್ಭದಲ್ಲಿ ಕೆಲವು ದೋಷ ನಿವಾರಣೆಗಾಗಿ ಪ್ರದರ್ಶಕರಿಂದ ನೀರು ಹೊಯ್ಯುವ ಪದ್ಧತಿ ಇದೆ. ಪ್ರದರ್ಶನದ ಸಂದರ್ಭದಲ್ಲಿ ಮನೆಯ ಯಜಮಾನ ಅಥವಾ ಹಿರಿಯರು ಕಲೆಂಜನಲ್ಲಿ ತಮ್ಮ ಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ.

ನೀರು ಹೊಯ್ಯುವ ಈ ಕೆಳಗಿನ ಸಂದರ್ಭಗಳನ್ನು ನಾವು ಗುರುತಿಸಬಹುದು.
1. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ
2. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ದನ ಕರು ಹಾಕದಿದ್ದರೆ ಅದರ ತಲೆಗೆ
5. ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.

ಹೀಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ರೋಗ ರುಜಿನಾದಿಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಹೋಗಲಾಡಿಸಿ ಜನಸಮುದಾಯ ಮತ್ತು ಸಾಕುಪ್ರಾಣಿಗಳ,ನಾಡಿನ ಫಸಲಿನ ಸಂರಕ್ಷಕನಾಗಿ ಕಲೆಂಜ ಕಾಣುತ್ತಾನೆ. ಊರಿಗೆ ಬಂದ ಮಾರಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಜನಸಮುದಾಯಕ್ಕೆ ತರುವುದೇ ಕಲೆಂಜ ಕುಣಿತದ ಆಶಯವಾಗಿದೆ.

ಆಧುನಿಕತೆಯ ಭರಾಟೆಯಲ್ಲಿ ಹಲವೊಂದು ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿದ್ದರೂ ಕೆಲವೊಂದು ಆಚರಣೆಗಳು ಇಂದಿಗೂ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅದೇನೆ ಇದ್ರೂ, ನಮ್ಮ ತುಳುನಾಡಿನ ಆಚರಣೆ ಆರಾಧನೆಗಳಿಗೆ ಅದರದ್ದೇ ಆದ ವೈಶಿಷ್ಟ್ಯತೆ , ಮಹತ್ವ ಇರೋದಂತೂ ನಿಜ. ಅಲ್ಲದೇ ಇಂತಹ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಅಡಗಿರುವುದು ಸತ್ಯ. ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದಂತಹ ಇಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾದಂತಹ ಅಗತ್ಯತೆ ಖಂಡಿತವಾಗಿಯೂ ಇದೆ.

ಕೃಪೆ : ಮಾಹಿತಿ ಸಂಗ್ರಹ

Comments are closed.