ಕರಾವಳಿ

17 ಮಂದಿ ಬಿಜೆಪಿ ಸಂಸದರಿದ್ದರೂ ಕೊಡಗಿಗೆ ಪ್ರಧಾನಿಯನ್ನು ಕರೆಸಲಾಗಿಲ್ಲ: ಐವಾನ್ ಡಿಸೋಜಾ

Pinterest LinkedIn Tumblr

ಕುಂದಾಪುರ: ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗಲಿಲ್ಲ. ಆದರೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಹೋಲಿಕೆ ಮಾಡಿಕೊಂಡರೆ ಸ್ಥಳೀಯ ಮಟ್ಟದಲ್ಲಿ ನಾವು ಬಲಿಷ್ಠವಾಗಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕರಿದ್ದು, ಅವರೆಲ್ಲರೂ ಜನಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯ ಮೇಲಾಟ ನಡೆಯೋದಿಲ್ಲ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವಾನ್ ಡಿಸೋಜಾ ಹೇಳಿದರು.

ಅವರು ಕುಂದಾಪುರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಮಾತ್ರವಲ್ಲದೇ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಗ್ರಾಮೀಣ ಅಭಿವೃದ್ದಿ ಕನಸು ಕಂಡು ಅದನ್ನು ಸಾಕಾರಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಮತ್ತು ಒಲವು ಇರುವುದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸುತ್ತದೆ ಎಂದರು.

ಈಗಾಗಲೇ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದೇವೆ. ಪಟ್ಟಣ ಪಂಚಾಯತ್ ಅಭಿವೃದ್ದಿ, ನಗರಸಭೆ, ಪುರಸಭೆಗಳಿಗೆ ಹೆಚ್ಚು ಅನುದಾನವನ್ನು ಕೊಟ್ಟು ಅದರ ಅಭಿವೃದ್ದಿಗೆ ಕಾರಣವಾಗಿರುವುದು ಕಾಂಗ್ರೆಸ್ ಪಕ್ಷ. ಈ ಚುನಾವನೆಯಲ್ಲಿ ಕಾಂಗ್ರೆಸ್ ಜನರಪರವಾಗಿ ಕೆಲಸ ಮಾಡುವ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡ ಅವರು, ಜಿಲ್ಲೆಯ ನಾಲ್ಕು ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಅತ್ಯಂತ ಹೆಚ್ಚು ಬಹುಮತಗಳಿಂದ ಕಾಂಗ್ರೆಸ್ ಗೆದ್ದು ಬರುತ್ತದೆ. ನಾಲ್ಕು ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಪಾಲಾಗುತ್ತದೆ ಎಂದರು.

ಕೊಡಗು, ಮಡಿಕೇರಿಯಲ್ಲಿ ತೀವ್ರವಾದ ನೆರೆ ಬಂದು ಜನಜೀವನ ಅಸ್ತವ್ಯಸ್ಥಗೊಂಡು ಪ್ರಾಣ ಹಾನಿ ಸಂಭವಿಸಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುಮಾರು ಐದು ಸಾವಿರ ಕೋಟಿಗಳಷ್ಟು ನಷ್ಟ ಸಂಭವಿಸಿದೆ. ಇದುವರೆಗೂ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬಂದಿಲ್ಲ. ರಾಜ್ಯದಲ್ಲಿ 17 ಮಂದಿ ಬಿಜೆಪಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ದೊಡ್ಡ ದೊಡ್ಡ ಭಾಷಣ ಬಿಗಿಯುವ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟಿಲ್, ಸದಾನಂದ ಗೌಡ, ಪ್ರತಾಪಸಿಂಹ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆಸುವ ಗೋಜಿಗೆ ಹೋಗಿಲ್ಲ. ಇದು ಲೋಕಸಭಾ ಸದಸ್ಯರ ರಾಜಕೀಯ ದಿವಾಳಿತನವನ್ನು ಎತ್ತಿ ತೊರಿಸುತ್ತಿದೆ. ನೆರೆಪೀಡಿತ ರಾಜ್ಯ ಕೇರಳಾಕ್ಕೆ ಬಂದು ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿರುವ ಪ್ರಧಾನಿ ಮೋದಿಯವರನ್ನು ಕರ್ನಾಟಕ ರಾಜ್ಯಕ್ಕೆ ಕರೆದುಕೊಂಡು ಬರುವ ತಾಕತ್ ಇಲ್ಲದವರು ಯಾಕೆ ಸಂಸದರಾಗಬೇಕು. ರಾಜ್ಯದ ಹಲವು ಜಿಲ್ಲೆಗಳು ಎಡಬಿಡದೆ ಸುರಿದ ಮಳೆಗೆ ನಲುಗಿ ಹೋಗಿದ್ದು ಇದುವರೆಗೂ ಕೇಂದ್ರ ಸರ್ಕಾರ ಒಂದು ನಯಾಪೈಸೆಯೂ ಪರಿಹಾರ ಕೊಟ್ಟಿಲ್ಲ. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಐದು ರೂಪಾಯಿಯ ಪರಿಹಾರ ಘೋಷಣೆ ಮಾಡಲಿಕ್ಕೆ ಇವರಿಂದ ಸಾಧ್ಯವಾಗಿಲ್ಲ. ನೆರೆಯ ರಾಷ್ಟ್ರ ನೇಪಾಳಕ್ಕೆ ನೆರೆ ಬಂದಾಗ ಅಲ್ಲಿಗೆ ಹೋಗಿ ಪರಿಹಾರ ಕೊಡುವ ಪ್ರಧಾನಿಯವರು ಭಾರತ ದೇಶದ ಭಾಗವಾದ ಕರ್ನಾಟಕ ರಾಜ್ಯಕ್ಕೆ ಬರಲು ಇದುವರೆಗೂ ಸಾಧ್ಯವಾಗಿಲ್ಲ. ಚುನಾವಣಾ ಸಂದರ್ಭಗಳಲ್ಲಿ ಮಡಿಕೇರಿಗೆ ಹೋಗಿದ್ದೀರಿ. ಮಂಗಳೂರು, ಉಡುಪಿಗೆ ಬಂದಿದ್ದೀರಿ. ೨೮ ಬಾರಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿ ಉದ್ದುದ್ದ ಭಾಷಣ ಬಿಗಿದಿದ್ದೀರಿ. ಆದರೆ ಇಲ್ಲಿನ ಜನರು ಮೂಲಭೂತ ಸೌಕರ್ಯ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಇಲ್ಲಿಗೆ ಆಗಮಿಸಿಲ್ಲ ಎಂದು ಐವಾನ್ ಕೇಂದ್ರ ಸರ್ಕಾರದ ವಿರುದ್ದ ಆರೋಪದ ಸುರಿಮಳೆಗೈದರು.

ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಹಿರಿಯಣ್ಣ, ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ, ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

Comments are closed.