ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಮಂಗಳೂರು ಇದರ ನವದೆಹಲಿ ಘಟಕವು ಇದೇ ಅಕ್ಟೋಬರ್ ಎರಡರಂದು ನವದೆಹಲಿಯಲ್ಲಿ ಪಟ್ಲ ವಿಶ್ವ ಯಕ್ಷ ಸಂಭ್ರಮ ಸಮಾರಂಭವನ್ನು ನಡೆಸಲಿದೆ. ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವೇದಿಕೆಗೆ ಈ ವರ್ಷ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಹಿರಿಯ ತಲೆಮಾರಿನ ಪ್ರಸಿದ್ಧ ಯಕ್ಷಗಾನ ಪಾತ್ರಧಾರಿ ಅಳಿಕೆ ರಾಮಯ್ಯ ರೈ ವೇದಿಕೆ ಎಂದು ಹೆಸರಿಡಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಸಂಸತ್ ಸದಸ್ಯರಾದ ಡಾ. ಎಂ. ವೀರಪ್ಪ ಮೊಯಿಲಿ ಅವರು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದಿ ವೀಕ್ ಪತ್ರಿಕೆಯ ಸ್ಥಾನೀಯ ಸಂಪಾದಕರಾದ ಶ್ರೀ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರು ವಹಿಸಲಿದ್ದಾರೆ. ಮುಂಜಾನೆಯಿಂದ ರಾತ್ರಿ ವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ನಾಟ್ಯ ವೈಭವ ಮತ್ತು ಯಕ್ಷಗಾನ ಬಯಲಾಟವು ನಡೆಯಲಿದೆ. ಉದ್ಘಾಟನೆಯ ನಂತರ ನಡೆಯಲಿರುವ ಭೀಷ್ಮ ಸೇನಾಧಿಪತ್ಯ ಎಂಬ ಕಥಾನಕದ ತಾಳಮದ್ದಳೆಯಲ್ಲಿ ಡಾ. ವೀರಪ್ಪ ಮೊಯಿಲಿಯವರು ಅರ್ಥಧಾರಿಯಾಗಿಯೂ ಭಾಗವಹಿಸಲಿದ್ದಾರೆ.
ಸಂಜೆಯಿಂದ ರಾತ್ರಿಯ ವರೆಗೆ ಗಜೇಂದ್ರ ಮೋಕ್ಷವೆಂಬ ಯಕ್ಷಗಾನವು ನಡೆಯಲಿದೆ. ಹಿರಿಯ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಖ್ಯಾತ ಯಕ್ಷಗಾನ ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಉದಯೋನ್ಮುಖ ಯಕ್ಷಗಾನ ಕಲಾವಿದೆ ಬಿಂದಿಯಾ ಎಲ್. ಶೆಟ್ಟಿ ಸುರತ್ಕಲ್ ಅವರನ್ನು ಸನ್ಮಾನಿಸಲಾಗುವುದು ಎಂದು ನವದೆಹಲಿ ಘಟಕದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕವಿ ನಾಟಕಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರು ಅಪರಾಹ್ನ ನಡೆಯಲಿರುವ ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮುಖ್ಯ ಅತಿಥಿಯಾಗಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ದೆಹಲಿಯ ಆರ್.ಕೆ.ಪುರಂ ಕ್ಷೇತ್ರದ ಶಾಸಕರಾದ ಪ್ರಮಿಳಾ ಠೋಕಸ್ ಮತ್ತು ದೆಹಲಿ ಸರಕಾರದ ಜಿಎಸ್‌ಟಿ ಕಮೀಶನರ್ ಎಚ್ ರಾಜೇಶ್ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ. ನವದೆಹಲಿಯ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ದೆಹಲಿ ಬಿಲ್ಲವ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಪ್ರಭಾಕರ ಬಂಗೇರ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸರವು ಕೃಷ್ಣ ಭಟ್, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿಎಂ. ನಾಗರಾಜ್ ಮೊದಲಾದವರು ಪಾಲ್ಗೊಳ್ಳುವರು.
ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಮಂಗಳೂರು ಇದರ ಅಧ್ಯಕ್ಷರು ಮತ್ತು ಜನಪ್ರಿಯ ಯಕ್ಷಗಾನ ಭಾಗವತರಾದ ಪಟ್ಲ ಸತೀಶ ಶೆಟ್ಟಿಯವರು ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ಭಾಗವತಿಕೆ ಇರುತ್ತದೆ.ಡಾ. ಪುರುಷೋತ್ತಮ ಬಿಳಿಮಲೆ, ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ನಾವಡ, ಉಬರಡ್ಕ ಉಮೇಶ್ ಶೆಟ್ಟಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಉಜಿರೆ ನಾರಾಯಣ, ಮಾಧವ ಬಂಗೇರ, ರಾಕೇಶ್ ಅಡ್ಕ, ರಕ್ಷಿತ್ ಪಡ್ರೆ, ಅಕ್ಷಯ ಮಾರ್ನಾಡ್, ಲೋಕೇಶ್ ಮುಚ್ಚೂರು ಮುಂತಾದ ಮೇರುಮಟ್ಟದ ಕಲಾವಿದರು ಮುಮ್ಮೇಳದಲ್ಲಿರುತ್ತಾರೆ. ಪದ್ಮನಾಭ ಉಪಾಧ್ಯಾಯ, ಪ್ರಶಾಂತ್ ವಗೆನಾಡು ಹಿಮ್ಮೇಳದಲ್ಲಿರುವರು. ಯಕ್ಷಗಾನ ನಾಟ್ಯವೈಭವವನ್ನು ಶಿವಾನಿ ಸುರತ್ಕಲ್ ಮತ್ತು ಬಿಂದಿಯಾ ಶೆಟ್ಟಿ ಅವರು ನಡೆಸಲಿದ್ದಾರೆ. ದುಬಾಯಿ, ಮಸ್ಕತ್, ಮುಂಬಯಿ, ಗುಜರಾತ್, ಚೆನ್ನೈ ಸೇರಿದಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸುಮಾರು ೩೦ ಘಟಕಗಳಿಂದ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಪದಾಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಮಂಗಳೂರು ಇದರ ನವದೆಹಲಿ ಘಟಕವು ೨೦೧೬ರ ಸಪ್ಟಂಬರ್‌ನಲ್ಲಿ ಆರಂಭಗೊಂಡಿದ್ದು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ದೆಹಲಿಯಲ್ಲಿ ನಡೆಸಿಕೊಂದು ಬಂದಿದೆ. ಪಟ್ಲ ವಿಶ್ವ ಯಕ್ಷ ಸಂಭ್ರಮ ಸಮಾರಂಭದ ನಂತರ ನವದೆಹಲಿ ಘಟಕದಿಂದ ನಿವೇಶನ ರಹಿತ ಕನಿಷ್ಟ ಒಬ್ಬ ಕಲಾವಿದರಿಗೆ ಉಚಿತ ಮನೆಯ ನಿರ್ಮಾಣಕ್ಕೆ ಧನಸಹಾಯ ಮಾಡಲಾಗುವುದು ಎಂದು ವಸಂತ ಶೆಟ್ಟಿ ಬೆಳ್ಳಾರೆ ಅವರು ನುಡಿದರು.
ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಂಸ್ಥೆಯು ೩೦ ತಿಂಗಳುಗಳಲ್ಲಿ ಸುಮಾರು ರೂ. ಮೂರು ಕೋಟಿಗೂ ಹೆಚ್ಚಿನ ಮೊತ್ತದ ನಿರೀಕ್ಷೆಗೂ ಮೀರಿದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಶಕ್ತ ಕಲಾವಿದರ ಕುಟುಂಬಗಳಲ್ಲಿ ಭದ್ರತೆಯ ಭರವಸೆಯನ್ನು ಕೂಡ ಮೂಡಿಸಿದೆ. ನಿವೇಶನ ರಹಿತ ನೂರು ಮಂದಿ ಕಲಾವಿದರಿಗೆ ಉಚಿತ ನೂರು ಮನೆಗಳ ನಿರ್ಮಾಣ ಎಂಬ ಪಟ್ಲ ಯಕ್ಷಾಶ್ರಯ ಯೋಜನೆಯಲ್ಲಿ ಈಗಾಗಲೇ ಇಬ್ಬರು ಕಲಾವಿದರಿಗೆ ಎರಡು ಮನೆಗಳ ಹಸ್ತಾಂತರ ಮಾಡಲಾಗಿದ್ದು ಅಶಕ್ತ ಕಲಾವಿದರಿಗೆ ಮಾಸಿಕ ತಲಾ ರೂ ೧,೦೦೦ ಮಾಸಾಶನ ನೀಡಲಾಗುತ್ತದೆ.
ಟ್ರಸ್ಟಿನ ಆಶಯದಲ್ಲಿ ೭೩ ಅಶಕ್ತ ಕಲಾವಿದರಿಗೆ ತಲಾ ರೂಪಾಯಿ ೫೦,೦೦೦ ಗೌರವ ಧನ ವಿತರಣೆ, ಪ್ರಾದೇಶಿಕ ಘಟಕಗಳ ಸುಮಾರು ೬೦ ಮಂದಿ ಅಶಕ್ತ ಕಲಾವಿದರಿಗೆ ಗೌರವ ಧನ ವಿತರಣೆ, ಸುಮಾರು ೩೦೦ ಮಂದಿ ಕಲಾವಿದರಿಗೆ ಅಪಘಾತ ಚಿಕಿತ್ಸಾ ವೆಚ್ಚ ರೂ. ಮೂರು ಲಕ್ಷ ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ ರೂ. ಎಂಟು ಲಕ್ಷ ವಿಮಾ ಯೋಜನೆ ಜಾರಿ, ೧೫ ಜನ ಅಶಕ್ತ ಕಲಾವಿದರಿಗೆ ತಲಾ ರೂ. ೨೫,೦೦೦ ಚಿಕಿತ್ಸಾ ವೆಚ್ಚ ವಿತರಣೆ, ಅಪಘಾತ ಹಾಗೂ ಅನಾರೋಗ್ಯದಿಂದ ವಿಧಿವಶರಾದ ಎಂಟು ಮಂದಿ ಕಲಾವಿದರ ಕುಟುಂಬದವರಿಗೆ ತಲಾ ರೂ. ೫೦,೦೦೦ ಪರಿಹಾರ ಧನ ವಿತರಣೆ, ೧೨ ಜನ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕಾಗಿ ಸಹಾಯ ಧನ ವಿತರಣೆ, ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ, ಪ್ರಖ್ಯಾತ ಇಬ್ಬರು ಕಲಾವಿದರಿಗೆ ತಲಾ ಒಂದು ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ ಪ್ರದಾನ, ಪ್ರಸಿದ್ಧ ಕಲಾವಿದರಿಗೆ ಕಲಾ ಗೌರವ, ಕಲಾವಿದರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ, ಪಟ್ಲ ಸಂಭ್ರಮ ಸಂದರ್ಭದಲ್ಲಿ ರಕ್ತದಾನ ಶಿಬಿರ ಮುಂತಾದ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಪ್ರಖ್ಯಾತ ಭಾಗವತರುಗಳಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ’ಅಂಬುರುಹ’ ಎಂಬ ೩೦ ಪ್ರಸಂಗಗಳ ’ಕುಶ-ಲವ’ ಮತ್ತು ಬಲಿಪ ನಾರಾಯಣ ಭಾಗವತರ ೧೪ ಪ್ರಸಂಗಗಳ ’ಜಯಲಕ್ಷ್ಮೀ’ ಕೃತಿಗಳ ಪ್ರಕಾಶನವನ್ನು ಮಾಡಲಾಗಿದೆ. ಸುಮಾರು ೨೦೦ ಮಂದಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ್ ಅಡ್ಯಾರ್, ಜಗನ್ನಾಥ ಶೆಟ್ಟಿ ಬಾಳ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
Comments are closed.