ಕರಾವಳಿ

ಅಡುಗೆಮನೆಯ ಈ ಮಸಾಲೆ ಅಡುಗೆಗೂ ಸೈ, ಆರೋಗ್ಯಕ್ಕೂ ಸೈ..!

Pinterest LinkedIn Tumblr

ಭಾರತೀಯ ಅಡುಗೆಗಳು, ಇದು ಸಸ್ಯಾಹಾರಿಯೇ ಆಗಿರಲಿ, ಮಾಂಸಾಹಾರವೇ ಆಗಿರಲಿ, ಗರಂ ಮಸಾಲೆಯಂತೂ ಇರಲೇಬೇಕು. ಗರಂ ಮಸಾಲೆ ಎಂದರೆ ಕೆಲವಾರು ಭಾರತೀಯ ಸಾಂಬಾರ ಪದಾರ್ಥಗಳನ್ನು ನುಣ್ಣಗೆ ಅರೆದು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಿಟ್ಟು ಅಡುಗೆಯ ಸಮಯದಲ್ಲಿ ತೆರೆದು ಅಡುಗೆಯಲ್ಲಿ ಬೆರೆಸಲಾಗುತ್ತದೆ. ಭಾರತದ ಬಹುತೇಕ ಎಲ್ಲಾ ಅಡುಗೆಗಳಲ್ಲಿ ಗರಂ ಮಸಾಲೆ ಬಳಸುವುದು ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಬಳಸಲಾಗುತ್ತದೆ.

ಭಾರತೀಯರು ಗರಂ ಮಸಾಲೆ ಬೆರೆಸಿದ ಅಡುಗೆಯನ್ನು ಸೇವಿಸಿಯೇ ಬೆಳೆದಿರುವುದು ಸುಳ್ಳಲ್ಲ. ಗರಂ ಮಸಾಲೆಯಲ್ಲಿ ಏನೇನು ಬಳಸುತ್ತೀರಿ ಈ ಮಸಾಲೆಯನ್ನು ತಯಾರಿಸುವವರಲ್ಲಿ ಪ್ರಶ್ನಿಸಿದರೆ ಭಿನ್ನವಾದ ಉತ್ತರಗಳು ದೊರಕಬಹುದು. ಏಕೆಂದರೆ ಗರಂ ಮಸಾಲೆಗೆ ಬಳಸುವ ಸಾಮಾಗ್ರಿಗಳಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಕೊಂಚ ವ್ಯತ್ಯಾಸವಿರುತ್ತದೆ.

ವಿವಿಧ ಪ್ರದೇಶದಲ್ಲಿ ತಮ್ಮ ರುಚಿಗೆ ಅನುಗುಣವಾಗಿ ಕೊಂಚ ಬದಲಾವಣೆಗಳನ್ನು ಮಾಡಿರುತ್ತಾರೆ. ಆದರೆ ಮನೆಯಲ್ಲಿ ತಯಾರಿಸಿದ ಗರಂ ಮಸಾಲೆ ಸಿದ್ಧರೂಪದಲ್ಲಿ ಸಿಗುವ ಮಸಾಲೆಗಿಂತ ಹೆಚ್ಚು ರುಚಿ ಮತ್ತು ಆರೋಗ್ಯಕರ ಎಂದು ಎಲ್ಲರೂ ನಿರ್ವಿವಾದವಾಗಿ ಒಪ್ಪುತ್ತಾರೆ. ನಿಮ್ಮ ಮನೆಯಲ್ಲಿ ಯಾವುದೇ ಗರಂ ಮಸಾಲೆ ಬಳಸಿರಲಿ, ಇದನ್ನು ಬಳಸಿ ತಯಾರಿಸಿದ ಅಡುಗೆಯನ್ನು ಮಾತ್ರ ನಿಮ್ಮ ಮನೆಯ ಸದಸ್ಯರು ಮತ್ತು ಅತಿಥಿಗಳು ಚಪ್ಪರಿಸುವುದಂತೂ ಖಂಡಿತಾ. ಇದು ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು.

ಆಹಾರತಜ್ಞೆ ವಿವರಿಸುವ ಪ್ರಕಾರ “ಪ್ರತಿ ಸಾಂಬಾರ ಪದಾರ್ಥದ ಒಳ್ಳೆಯ ಗುಣಗಳೆಲ್ಲಾವೂ ಕ್ರೋಢೀಕರಿಸಿ ಗರಂ ಮಸಾಲೆಯ ಮೂಲಕ ಗರಿಷ್ಟ ಪ್ರಯೋಜನ ದೊರಕುತ್ತದೆ. ಗರಂ ಮಸಾಲೆಗೆ ಇಂತಹದ್ದೇ ಎಂದು ಒಂದು ಖಚಿತ ಮಿಶ್ರಣದ ಪ್ರಮಾಣವಿಲ್ಲ, ಹಾಗಾಗಿ ಅಡುಗೆಯನ್ನು ಆಧರಿಸಿ ಈ ಮಸಾಲೆಯ ಪ್ರಯೋಜನಗಳೂ ಕೊಂಚ ಮಟ್ಟಿಗೆ ಭಿನ್ನವಾಗಿರುತ್ತವೆ” ಈ ಪ್ರಯೋಜನಗಳು ದಿನದ ಅಡುಗೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬಳಕೆಯಾಗಿದೆ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಪ್ರತಿ ಅಡುಗೆಯಲ್ಲಿ ಚಿಟಿಕೆಯಷ್ಟೇ ಗರಂ ಮಸಾಲೆಯ ಪುಡಿಯನ್ನು ಬೆರೆಸಲಾಗಿರುತ್ತದೆ. ಅಗತ್ಯದ ರುಚಿಯನ್ನು ಪಡೆಯಲು ಇಷ್ಟೇ ಸಾಕು. ಗರಂ ಮಸಾಲೆ ತಯಾರಿಸಲು ಅಗತ್ಯವಿರುವ ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಲವಂಗ, ದಾಲ್ಚಿನ್ನಿ, ಜೀರಿಗೆ, ಜಾಯಿಕಾಯಿ, ಕಾಳುಮೆಣಸು, ಏಲಕ್ಕಿ ಹಾಗೂ ದಾಲ್ಚಿನ್ನಿ ಎಲೆ (ತೇಜ್ ಪತ್ತಾ) ಗಳನ್ನು ಬಳಸಲಾಗುತ್ತದೆ. ಗರಂ ಮಸಾಲೆಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನಾವೆಲ್ಲರೂ ಅರಿತಿರುವುದು ಅಗತ್ಯವಾಗಿದೆ:

1. ಜೀರ್ಣಕ್ರಿಯೆ ಚುರುಕುಗೊಳಿಸುತ್ತದೆ
ಗರಂ ಮಸಾಲೆಯನ್ನು ಅಡುಗೆಯಲ್ಲಿ ಬಳಸುವುದರಿಂದ ದೊರಕುವ ಪ್ರಮುಖ ಪ್ರಯೋಜನವೆಂದರೆ ಹಸಿವನ್ನು ಪ್ರಚೋದಿಸುವುದು ಹಾಗೂ ಈ ಮೂಲಕ ಜಠರರಸವನ್ನು ಹೆಚ್ಚು ಸ್ರವಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು. ಗರಂ ಮಸಾಲೆಯಲ್ಲಿರುಅ ಲವಂಗ ಮತ್ತು ಜೀರಿಗೆ ಈ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿ ಅಜೀರ್ಣತೆಯಿಂದ ದೂರವಿರಿಸುತ್ತವೆ ಹಾಗೂ ಆಮ್ಲೀಯತೆಯಾಗುವುದರಿಂದ ತಡೆಯುತ್ತವೆ. ಇದರೊಂದಿಗೆ ಕಾಳುಮೆಣಸು ಮತ್ತು ಏಲಕ್ಕಿ ಸಹಾ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತವೆ. ಜೀರ್ಣಕ್ರಿಯೆಗೆ ಸರಳ ಮನೆಮದ್ದು ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ರಸ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

2. ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ
ಗರಂ ಮಸಾಲೆಯಲ್ಲಿರುವ ಸಾಮಾಗ್ರಿಗಳೆಲ್ಲವೂ ಫೈಟೋನ್ಯೂಟ್ರಿಯೆಂಟ್ ಅಥವಾ ಹೋರಾಡುವ ಶಕ್ತಿಯುಳ್ಳ ಪೋಷಕಾಂಶಗಳಿಂದ ಭರಿತವಾಗಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ವಿಶೇಷವಾಗಿ ಕಾಳುಮೆಣಸು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹಲವಾರು ಖನಿಜಗಳಿದ್ದು ದೇಹದ ವಿವಿಧ ಅಂಗಗಳ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

3. ಆಂಟಿ ಆಕ್ಸಿಡೆಂಟ್ ಭರಿತವಾಗಿದೆ
ಗರಂ ಮಸಾಲೆಯಲ್ಲಿರುವ ಪ್ರತಿ ಸಾಮಾಗ್ರಿಯೂ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ದೇಹವನ್ನು ಹಲವಾರು ಬಗೆಯ ಸೋಂಕುಗಳು, ಉರಿಯೂತಗಳಿಂದ ರಕ್ಷಣೆ ಒದಗಿಸ್ತುತವೆ ಹಾಗೂ ವಿಶೇಷವಾಗಿ ತ್ವಚೆಯ ತೊಂದರೆಯಿಂದ ರಕ್ಷಿಸುತ್ತವೆ.

4. ಹೊಟ್ಟೆಯುಬ್ಬರಿಕೆ ಮತ್ತು ವಾಯುಪ್ರಕೋಪವನ್ನು ತಡೆಯುತ್ತದೆ
ಆರೋಗ್ಯ ತಜ್ಞರು ವಿವರಿಸುವ ಪ್ರಕಾರ ಗರಂ ಮಸಾಲೆಯಲ್ಲಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಸಾರಸಂಗ್ರಹಿ ಗುಣವೂ ಇದ್ದು ತನ್ಮೂಲಕ ಹೊಟ್ಟೆಯುಬ್ಬರಿಕೆ, ವಾಕರಿಕೆ ಹಾಗೂ ಜೀರ್ಣಾಂಗಗಳಲ್ಲಿ ವಾಯು ಉತ್ಪತ್ತಿಯಾಗಿ ವಾಯುಪ್ರಕೋಪವಾಗುವುದರಿಂದ ತಡೆಯುತ್ತದೆ. ಅಲ್ಲದೇ ಗರಂ ಮಸಾಲೆಯಲ್ಲಿರುವ ಸಾಮಗ್ರಿಗಳು ಜೀರ್ಣವ್ಯವಸ್ಥೆಯನ್ನು ಉತ್ತಮವಾಗಿರಿಸಲು ನೆರವಾಗುತ್ತದೆ. ಹೊಟ್ಟೆಯುಬ್ಬರಿಕೆ ಥಟ್ಟನೇ ಪಾರಾಗಲು ದಾಲ್ಚಿನ್ನಿ ಅಥವಾ ಚೆಕ್ಕೆಯೂ ಉತ್ತಮ ಆಯ್ಕೆಯಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯನ್ನು ಶಮನಗೊಳಿಸುತ್ತ್ತದೆ. ಇದಕ್ಕಾಗಿ ತಲಾ ಅರ್ಧ ಚಿಕ್ಕ ಚಮಚದಷ್ಟು ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಉಗುರುಬೆಚ್ಚಗಾಗಿಸಿದ ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಯಾವಾಗ ವಾಯುಪ್ರಕೋಪ ಎದುರಾಯಿತೋ ಆಗ ತಕ್ಷಣವೇ ಈ ಪೇಯವನ್ನು ಕುಡಿಯುವ ಮೂಲಕ ತೊಂದರೆಯಿಂದ ಮುಕ್ತಿ ಪಡೆಯಬಹುದು.

5. ಬಾಯಿಯ ದುರ್ವಾಸನೆಯ ವಿರುದ್ದ ಹೋರಾಡುತ್ತದೆ:
ಗರಂ ಮಸಾಲೆಯಲ್ಲಿರುವ ಲವಂಗ ಮತ್ತು ಏಲಕ್ಕಿ ಬಾಯಿಯ ದುರ್ವಾಸನೆಯ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ಬಾಯಿಯ ದುರ್ವಾಸನೆ ತಡೆಯಲೆಂದೇ ನಾವು ಪ್ರತ್ಯೇಕವಾದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲವಾದುದರಿಂದ ಅನೈಚ್ಛಿಕವಾಗಿ ಗರಂ ಮಸಾಲೆಯನ್ನು ಸೇವಿಸುವ ಮೂಲಕ ಬಾಯಿಯಲ್ಲಿ ದುರ್ವಾಸನೆ ಮೂಡುವುದರಿಂದ ರಕ್ಷಣೆ ಪಡೆಯುತ್ತೇವೆ. ಸಾಮಾನ್ಯವಾಗಿ ಪಲ್ಯ ಮತ್ತು ಇತರ ಖಾರವಾದ ಖಾದ್ಯಗಳಲ್ಲಿ ಗರಂ ಮಸಾಲೆಯ ಹೊರತಾಗಿ ಇತರ ಸಾಮಾಗ್ರಿಗಳನ್ನು ಕೊಂಚ ಹೆಚ್ಚೇ ಬಳಸುವುದರಿಂದ ಕೆಲವರಿಗೆ ಜೀರ್ಣಕ್ರಿಯೆಯಲ್ಲಿ ಬಾಧೆಯುಂಟಾಗುತ್ತದೆ. ಹಾಗಾಗಿ ಕೆಲವರು ಮಸಾಲೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಬಿಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಇದೇ ಕಾರಣಕ್ಕೆ ಗರಂ ಮಸಾಲೆಯನ್ನು ಸೇವಿಸದಿರುವುದಕ್ಕೆ ಯಾವುದೇ ಕಾರಣ ಉಳಿಯುವುದಿಲ್ಲ. ಆದರೆ ಹೊಟ್ಟೆ ಅಥವಾ ಕರುಳಿನಲ್ಲಿ ಅಲ್ಸರ್ ಅಥವಾ ಹುಣ್ಣುಗಳಿದ್ದು ಈ ಭಾಗದಲ್ಲಿ ಯಾವುದೇ ಖಾರವಾದ ಸಾಂಬಾರ ಪದಾರ್ಥ ಆಗಮಿಸಿದರೆ ಅಪಾರವಾದ ಉರಿಯಾಗುವುದರಿಂದ ಈ ವ್ಯಕ್ತಿಗಳಿಗೆ ಗರಂ ಮಸಾಲೆ ಸಹಿತ ಯಾವುದೇ ಮಸಾಲೆ ಸೂಕ್ತವಲ್ಲ. ಇನ್ನುಳಿದಂತೆ, ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ಚಿಟಿಕೆಯಷ್ಟು ಗರಂ ಮಸಾಲೆ ಬೆರೆಸಿದ ಆಹಾರಗಳನ್ನು ನಿತ್ಯವೂ ಯಾವುದೇ ಹೆದರಿಕೆಯಿಲ್ಲದೇ ಸೇವಿಸಬಹುದು. ಬಾಯಿ ದುರ್ವಾಸನೆ ಬರದೇ ಇರಲು ಹೀಗೆ ಮಾಡಿ, ಬಾಯಿಯ ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದು, ಸಾಕಷ್ಟು ನೀರು ಕುಡಿಯುವುದು, ಆಹಾರವನ್ನು ಪೂರ್ಣವಾಗಿ ಜಗಿದು ನುಂಗುವುದು, ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಮತ್ತು ಒಂದು ಬಾರಿ ನಾಲಿಗೆಯನ್ನು ಕೆರೆದು ಸ್ವಚ್ಛಗೊಳಿಸುವುದು, ದಿನದ ಕೆಲಹೊತ್ತಾದರೂ ಮೂಗಿನಿಂದ ಉಚ್ಛ್ವಾಸ ಮತ್ತು ಬಾಯಿಯಿಂದ ನಿಃಶ್ವಾಸ ಬಿಡುವ ಕ್ರಮವನ್ನು ಅನುಸರಿಸುವುದು ಇತ್ಯಾದಿಗಳಿಂದ ಈ ಸ್ಥಿತಿ ಬರದೇ ಇರುವಂತೆ ನೋಡಿಕೊಳ್ಳುವುದೇ ಆರೋಗ್ಯಕರ ಮತ್ತು ಜಾಣತನದ ಮಾರ್ಗವಾಗಿದೆ.

Comments are closed.