ಕರಾವಳಿ

ವಿದ್ಯಾರ್ಥಿಗೆ ಉಪನ್ಯಾಸಕರಿಂದ ಹಲ್ಲೆ ಆರೋಪ: ಕುಂದಾಪುರ ಡಾ. ಬಿಬಿ ಹೆಗ್ಡೆ ಕಾಲೇಜು ಮುಂದೆ ಧರಣಿ

Pinterest LinkedIn Tumblr

ಕುಂದಾಪುರ: ಇಲ್ಲಿನ ಸಂಗಮ್ ಸಮೀಪವಿರುವ ಡಾ. ಬಿಬಿ ಹೆಗ್ಡೆ ಕಾಲೇಜು ಸಹ ಪ್ರಾಂಶುಪಾಲರು ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂದೆ ಧರಣಿ ನಡೆಸಿದ ಘಟನೆ ಬುಧವಾರ ನಡೆದಿದೆ.

ಮಂಗಳವಾರ ತರಗತಿಯಲ್ಲಿ ಪಟಾಕಿ ಹೊಡೆಸಿದ್ದಾರೆ ಎಂದು ಯಾವುದೇ ತಪ್ಪು ಮಾಡದ ವಿದ್ಯಾರ್ಥಿಯೋರ್ವನ ಮೇಲೆ ಸಹ ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆ. ಒಂದು ವೇಳೆ ತಪ್ಪು ಮಾಡಿದ್ದರೆ ಕರೆಸಿ ಕಾಲೇಜು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಮನಬಂದಂತೆ ಹಲ್ಲೆ ನಡೆಸಿದ್ದನ್ನು ಖಂಡಿಸುತ್ತೇವೆ. ಈ ಹಿಂದೆಯೂ ಅವರು ಕ್ಷುಲ್ಲಕ ವಿಚಾರಗಳಿಗೆ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಹಲ್ಲೆ ನಡೆಸಿರುವುದು ಸರಿನಾ ಎಂದು ನ್ಯಾಯಯುತವಾಗಿ ಪ್ರಶ್ನಿಸಿದರೆ ಉಡಾಫೆಯ ಮಾತನಾಡುತ್ತಾರೆ. ಹಲ್ಲೆ ನಡೆಸಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ತೋರಿಸಿ ಎಂದರೆ ಅದನ್ನು ತೋರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬುಧವಾರ ಬೆಳಿಗ್ಗೆಯಿಂದ ತರಗತಿಗೆ ಹೋಗದೆ ಕಾಲೇಜು ಮುಂಭಾಗದಲ್ಲಿ ಧರಣಿ ಕೂತು ಸಹ ಪ್ರಾಂಶುಪಾಲರ ಹಾಗೂ ಕಾಲೇಜಿನ ವಿರುದ್ದ ಧಿಕ್ಕಾರಗಳನ್ನು ಕೂಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆ ಮಾಡಿದ ಸಹ ಪ್ರಾಂಶುಪಾಲರನ್ನು ಕಾಲೇಜಿನಿಂದ ವಜಾಗೊಳಿಸಬೇಕು, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಕಾಲೇಜಿನ ವಿರುದ್ದ ಧಿಕ್ಕಾರ ಕೂಗುತ್ತಿರುವ ವೇಳೆಯಲ್ಲಿ ಪ್ರಾಂಶುಪಾಲರು ಧರಣಿಯ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಕಾಲೇಜಿನ ಆವರಣದೊಳಗೆ ಕೂಗಬೇಡಿ ಉಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದಾಗ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪೊಲೀಸರ ಮಧ್ಯ ಪ್ರವೇಶ
ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ಜೋರಾದಾಗ ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್ ನಾಯ್ಕ್ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿದರು. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಠಾಣೆಯಲ್ಲಿ ಪರವಾನಿಗೆ ತೆಗೆದುಕೊಂಡು ಪ್ರತಿಭಟಿಸಿ ಅದನ್ನು ಬಿಟ್ಟು ಏಕಾ‌ಏಕಿಯಾಗಿ ಧರಣಿ ಕೂರುವುದು ಸರಿಯಲ್ಲ. ನನ್ನ ಮಾತನ್ನು ಮೀರಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.

Comments are closed.