ಕರಾವಳಿ

ಲೆಕ್ಕಪತ್ರದ ಸಮನ್ವಯತೆಗೆ ಸಹಕಾರ ಸಂಘಗಳಲ್ಲಿ ‘ಕಾಮನ್ ಸಾಪ್ಟ್‌ವೇರ್’ ಅಳವಡಿಕೆ : ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್

Pinterest LinkedIn Tumblr

ಮಂಗಳೂರು :ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯಲ್ಲಿ ಲೆಕ್ಕಪತ್ರದ ಬಗ್ಗೆ ಸಮನ್ವಯತೆ ಮೂಡಿಸುವ ಉದ್ದೇಶದಿಂದ ‘ ಕಾಮನ್ ಸಾಪ್ಟ್‌ವೇರ್’ ಅಳವಡಿಸಲು ಸರಕಾರ ನಿರ್ಧರಿಸಿದೆ ಎಂದು ರಾಜ್ಯದ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಬಂಡೆಪ್ಪ ಕಾಶಂಪೂರ್ ಅವರು ಹೇಳಿದ್ದಾರೆ.

ಅವರು ಎಸ್‌ಸಿಡಿಸಿಸಿ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಸಮಾಲೋಚನಾ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿಯೊಂದು ಸಹಕಾರ ಸಂಘಗಳಿಗೂ ಬ್ಯಾಂಕಿನ ವತಿಯಿಂದ ಮಿನಿ ಎಟಿ‌ಎಂಗಳನ್ನು ನೀಡಿ ಎಲ್ಲಾ ಸಹಕಾರ ಸಂಘಗಳು ರೂಪೇ ಡೆಬಿಟ್ ಕಾರ್ಡ್‌ಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಯೋಜನೆ ಜಾರಿಯಲ್ಲಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಪ್ರಸಕ್ತ ಸಾಲ ಮನ್ನಾ ಯೋಜನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ರೈತರು ಸ್ವಯಂ ದೃಢೀಕರಣ ಪತ್ರದ ಜೊತೆಗೆ ರೇಷನ್ ಕಾರ್ಡ್, ಸಾಲಗಾರನ ಆಧಾರ್ ಪ್ರತಿಯನ್ನು ಅರ್ಜಿಯ ಜೊತೆಗೆ ಸಲ್ಲಿಸಿ ಸಾಲಮನ್ನಾ ಸೌಲಭ್ಯವನ್ನು ಪಡೆಯಬಹುದು. ಸ್ವಸಹಾಯ ಸಂಘಗಳ ಮಹಿಳಾ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಪುರುಷ ಗುಂಪುಗಳಿಗೆ ಶೇಕಡಾ ೪ರ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರದ ಯೋಜನೆಗಳನ್ನು ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಬ್ಯಾಂಕ್ ಜಾರಿಗೊಳಿಸಿ ಯಶಸ್ಸನ್ನು ಕಂಡಿದೆ.

ರೂಪೇ ಡೆಬಿಟ್ ಕಾರ್ಡಿನ ವ್ಯಾಪ್ತಿ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಲ್ಲಿಯೂ ಇರುವ ಕಾರಣದಿಂದಾಗಿ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳಿಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಜೊತೆಗೆ ಸಂಪರ್ಕ ಸಿಗುತ್ತಿದೆ. ದೇಶದಲ್ಲಿ ಯಾವುದೇ ಬ್ಯಾಂಕಿನ ಎ.ಟಿ.ಎಂ ಗಳಲ್ಲಿಯೂ ಈ ಕಾರ್ಡನ್ನು ಉಪಯೋಗಿಸುತ್ತಿರುವುದರಿಂದ ಈ ಸಂಪರ್ಕ ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸದಸ್ಯರಿಗೂ ಸಿಗಬೇಕಾಗಿದೆ.

ಇದಕ್ಕೆ ಬೇಕಾದ ಸಾಪ್ಟವೇರ್‌ನ್ನು ಬ್ಯಾಂಕ್ ಈಗಾಗಲೇ ಅಭಿವೃದ್ಧಿ ಪಡಿಸಿದ್ದು ಬ್ಯಾಂಕಿನ ವತಿಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಕಾಮನ್ ಸಾಪ್ಟ್‌ವೇರ್ ಅಳವಡಿಸಲು ಸರಕಾರದಿಂದ ಸಹಾಯಧನ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ಸಹಕಾರ ಸಚಿವರು ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಈ ಸಂದರ್ಭದಲ್ಲಿ ಅವರನ್ನು ಜಿಲ್ಲೆಯ ಸಮಸ್ತ ಸಹಕಾರಿಗಳ ಪರವಾಗಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರು ಸನ್ಮಾನಿಸಿದರು.

ಸಮಾಲೋಚನಾ ಸಭೆಯಲ್ಲಿ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಶ್ರೀ ಎಂ.ಕೆ ಅಯ್ಯಪ್ಪ, ಸಹಕಾರ ಸಂಘಗಳ ಮೈಸೂರು ವಿಭಾಗದ ಜಂಟಿ ನಿಬಂಧಕರಾದ ಶ್ರೀ ಬಿ. ಆರ್. ಲಿಂಗರಾಜು, ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಎಂ.ವೆಂಕಟಸ್ವಾಮಿ, ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಬಿ. ನಿರಂಜನ್, ಶ್ರೀ ಟಿ.ಜಿ.ರಾಜಾರಾಮ ಭಟ್, ಶ್ರೀ ಭಾಸ್ಕರ್ ಎಸ್ ಕೋಟ್ಯಾನ್, ಶ್ರೀ ಎಂ.ವಾದಿರಾಜ್ ಶೆಟ್ಟಿ, ಶ್ರೀ ರಘುರಾಮ ಶೆಟ್ಟಿ, ಶ್ರೀ ರಾಜು ಪೂಜಾರಿ, ಶ್ರೀ ಕೆ.ಎಸ್ ದೇವರಾಜ್, ಶ್ರೀ ಸದಾಶಿವ ಉಳ್ಳಾಲ್,ಶ್ರೀ ಶಶಿಕುಮಾರ್ ರೈ, ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಳಪು, ಶ್ರೀ ರಾಜೇಶ್ ರಾವ್, ಶ್ರೀ ಎನ್.ರಮೇಶ್ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕರುಗಳಾದ ಶ್ರೀ ಬಿ.ಕೆ.ಸಲೀಂ, ಶ್ರೀ ಪ್ರವೀಣ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್, ಎಸ್‌ಸಿಡಿಸಿಸಿ ಬ್ಯಾಂಕಿನ ಸಿ‌ಇ‌ಒ ಶ್ರೀ ಬಿ.ರವೀಂದ್ರ ಇವರು ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು, ನಿರ್ದೇಶಕರಾದ ಶ್ರೀ ಟಿ.ಜಿ.ರಾಜಾರಾಮ ಭಟ್  ಪ್ರಾಸ್ತವನೆ ಗೈದರು, ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.