ಕರಾವಳಿ

ಸರಕಾರದ ಸುತ್ತೋಲೆಗೆ ಕಿಂಚಿತ್ತು ಬೆಲೆಯಿಲ್ಲವೇ : ಶಾಸಕ ವೇದವ್ಯಾಸ ಕಾಮತ್ ಪ್ರಶ್ನೆ

Pinterest LinkedIn Tumblr

ಮಂಗಳೂರು : ಸರಕಾರವೇ ದಸರ ರಜೆಯನ್ನು ಕಡಿತಗೊಳಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ ಮೇಲೂ ಕೆಲವು ಶಿಕ್ಷಣ ಸಂಸ್ಥೆಗಳು ರಜೆ ನೀಡುವುದಕ್ಕೆ ಒಪ್ಪುತ್ತಿಲ್ಲ.ಹಾಗಾದರೆ ಸರಕಾರದ ಸುತ್ತೋಲೆಗೆ ರವೆಯಷ್ಟೂ ಬೆಲೆಯಿಲ್ಲವೇ ? ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದ ಪ್ರಮುಖ ಹಬ್ಬವಾಗಿರುವ ನವರಾತ್ರಿಯ ಉತ್ಸವದಲ್ಲಿ ಮಂಗಳೂರು ದಸರಾ ಎನ್ನುವುದಕ್ಕೆ ವಿಶೇಷವಾದ ಸ್ಥಾನವಿದೆ. ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಸರಕಾರದ ಸಚಿವರುಗಳಾಗಿದ್ದ ಎನ್ ಮಹೇಶ್ ಹಾಗೂ ಸಚಿವ ಜಿಟಿ ದೇವೆಗೌಡರಿಗೆ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂಥಿಲ್ ಅವರಿಗೆ ಮನವಿ ಮಾಡಿದ್ದರು.

ಅದರ ನಂತರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯುಟಿ ಖಾದರ್ ಅವರು ಅಕ್ಟೋಬರ್ 7 ರಿಂದ 21 ರ ತನಕ ಮಕ್ಕಳಿಗೆ ಕೊಡುವ ರಜೆಯಲ್ಲಿ ಯಾವುದೇ ಕಡಿತ ಮಾಡಬಾರದು ಎಂದು ಸೂಚನೆ ಹೊರಡಿಸಿದ್ದರು.

ಆದರೆ ರಾಜ್ಯ ಸರಕಾರದ ಭಾಗವಾಗಿರುವ ಸಚಿವರ ಆದೇಶದ ಹೊರತಾಗಿಯೂ ಮಂಗಳೂರು ನಗರ ದಕ್ಷಿಣದ ಕೆಲವು ಶಾಲೆಗಳಲ್ಲಿ ರಜೆಯನ್ನು ಕೊಡದೇ ಆಡಳಿತ ಮಂಡಳಿಯವರು ಸರಕಾರದ ಆಜ್ಞೆಯನ್ನು ದಿಕ್ಕರಿಸುತ್ತಿದ್ದಾರೆ. ಅದರಿಂದ ಮಕ್ಕಳ ಪೋಷಕರು, ಅಧ್ಯಾಪಕರು ಮತ್ತು ನಾಗರಿಕರು ಈ ಬಗ್ಗೆ ಶಾಸಕರುಗಳಿಗೆ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿಸುತ್ತಿದ್ದಾರೆ.

ಆದ್ದರಿಂದ ಇನ್ನು ತಡ ಮಾಡದೇ ಅಂತಹ ಶಿಕ್ಷಣ ಸಂಸ್ಥೆಗಳು ಶೀಘ್ರದಲ್ಲಿ ಸರಕಾರದ ಸುತ್ತೋಲೆಯನ್ನು ಪಾಲಿಸಿ ಮಕ್ಕಳಿಗೆ ರಜೆ ನೀಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ

Comments are closed.