ದಿನದಿಂದ ದಿನಕ್ಕೆ ಬೇಸಿಗೆಯ ಝಳ ಹೆಚ್ಚಾಗುತ್ತಲೇ ಇದೆ. ಬೇಸಿಗೆಯ ಬಿಸಿಲನ್ನು ದೊಡ್ಡವರು ಹೇಗೋ ಸಹಿಸಿಕೊಳ್ಳಬಹುದು. ಆದರೆ ಮಕ್ಕಳು ಹೇಗೆ ಸಹಿಸಲು ಸಾಧ್ಯ. ಅದರಲ್ಲೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಕಂಡು ಬರುವ ಬೆವರುಸಾಲೆ ಕಿರಿಕಿರಿ ತಡೆಯೋದು ಹೇಗೆ ಎಂಬುದು ಯಕ್ಷ ಪ್ರಶ್ನೆ. ಬೆವರುಸಾಲೆ ಅಂದರೆ ಬೇಸಿಗೆಯ ಶಾಖ ತಾಳದೇ ಮೈಮೇಲೆ ಎದ್ದೆಳ್ಳುವ ಸಣ್ಣ ಗುಳ್ಳೆಗಳು. ಇವು ಕೆಂಪಾಗಿ ಇದ್ದು, ಕಿರಿಕಿರಿ ಉಂಟು ಮಾಡುತ್ತವೆ.
ಬೆವರುಸಾಲೆ ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ, ಆದರೂ ಕೆಲವೊಮ್ಮೆ ಇದು ಅತಿ ಗಂಭೀರವಾಗಬಹುದು. ಮಕ್ಕಳಲ್ಲಿ ಬೆವರಗ್ರಂಥಿಗಳು ಇನ್ನೂ ಬೆಳೆಯುವ ಹಂತದಲ್ಲಿರುವುದರಿಂದ ಇದು ಅವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು.ಅದು ನಿಧಾನವಾಗಿ ತನ್ನಷ್ಟಕ್ಕೆ ತಾನೇ ಗುಣವಾದರೂ, ಪೂರ್ತಿಯಾಗಿ ಕಡಿಮೆಯಾಗುವ ತನಕ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ.ಇನ್ನು ಮಕ್ಕಳು ಅದನ್ನು ತುರಿಸಲು ಶುರು ಮಾಡಿದರೆ, ಅದರ ಚರ್ಮ ಕಿತ್ತು ಬಂದು ಸೋಂಕಾಗುವ ಸಾಧ್ಯತೆಗಳಿರುತ್ತವೆ ಈ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತೀ ಅಗತ್ಯ.
ಬೆವರುಸಾಲೆಯ ಪರಿಹಾರಕ್ಕೆ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಚರ್ಮದ ರಂಧ್ರಗಳು ಮುಚ್ಚಿಹೋಗಿ ಗಾಯವನ್ನು ಇನ್ನಷ್ಟು ಜಾಸ್ತಿ ಮಾಡಬಹುದು. ಆದುದರಿಂದ ಪ್ರಕೃತಿದತ್ತವಾಗಿ, ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಬೆವರುಸಾಲೆಯನ್ನು ಗುಣಪಡಿಸಬಹುದು.ಅದಕ್ಕಾಗಿ ಇಲ್ಲಿದೆ ನೋಡಿ ಕೆಲವು ಸುಲಭಸೂತ್ರಗಳು.
ಚರ್ಮಕ್ಕೆ ಗಾಳಿ ತಾಗುವಂತೆ ನೋಡಿಕೊಳ್ಳಿ:
ಬೆವರುಸಾಲೆ ಸಾಮಾನ್ಯವಾಗಿ ಬಟ್ಟೆ ಧರಿಸುವ ಜಾಗದಲ್ಲಿ, ಗಾಳಿಯಾಡದೆ ಇರುವಲ್ಲಿ ಕಂಡುಬರುತ್ತದೆ.ಮಕ್ಕಳಲ್ಲಿ ಇದು ಸಾಮಾನ್ಯವಾಗಿ, ಶರೀರದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದರಿಂದ, ಈ ದದ್ದುಗಳು ಕಡಿಮೆಯಾಗುವ ತನಕ ಬಟ್ಟೆ ಧರಿಸದಿರುವುದು ಉತ್ತಮ.
ಸೂರ್ಯ ಕಿರಣಗಳಿಂದ ತಪ್ಪಿಸಿಕೊಳ್ಳಿ:
ಬೇಸಿಗೆಯಲ್ಲಿ ಬೆಳಿಗ್ಗೆ 11:00ರಿಂದ 3:00 ಗಂಟೆ ತನಕ ಹೊರಗಡೆ ಹೋಗದಿರುವುದು ಉತ್ತಮ.ಇನ್ನು ಮಕ್ಕಳಿಗೆ ಬೆವರುಸಾಲೆ ಇದ್ದರೆ ಅದು ಕಡಿಮೆಯಾಗುವ ತನಕ ಬೇರೆ ಸಮಯದಲ್ಲೂ ಹೊರಗಡೆ ಹೋಗುವುದನ್ನು, ಆಟವಾಡುವುದನ್ನು ತಡೆಯುವುದು ಒಳ್ಳೆಯದು.
ತಣ್ಣೀರನ್ನು ಹೆಚ್ಚಾಗಿ ಬಳಸಿ:
ಬೇಸಿಗೆಯಲ್ಲಿ ಸಾಮಾನ್ಯವಾಗಿ ಟ್ಯಾಂಕರ್ ನಲ್ಲಿ ಇರುವ ನೀರು ಕೂಡ ಬಿಸಿಯಾಗಿರುತ್ತದೆ.ಹಾಗಾಗಿ ಆದಷ್ಟು ಮಕ್ಕಳನ್ನು ತಣ್ಣೀರಿನಲ್ಲಿ ಸ್ನಾನ ಮಾದಿಸಿ, ಮತ್ತು ದಿನದಲ್ಲಿ 2-3 ಸಲ ಸ್ನಾನ ಮಾಡಿಸುವುದರಿಂದ ದೇಹ ತಂಪಾಗಿ ಬೆವರುಸಾಲೆ ಕಡಿಮೆಯಾಗುತ್ತದೆ.
ತೆಳುವಾದ ಬಟ್ಟೆಯನ್ನು ಧರಿಸಿ:
ಮಕ್ಕಳಿಗೆ ಗಾಢ, ದಪ್ಪದ ಬಟ್ಟೆ ಧರಿಸುವುದರ ಬದಲು ಕಾಟನ್ ಅಥವಾ ಲಿನೆನ್ ತರಹದ ಮೃದುವಾದ ಬಟ್ಟೆಗಳನ್ನು ಧರಿಸುವುದು ಉತ್ತಮ. ಇದರಿಂದ ಶರೀರಕ್ಕೆ ಗಾಳಿಯಾಡಿ ಮಕ್ಕಳನ್ನು ಆರಾಮದಾಯಕವಾಗಿ ಇಡುತ್ತದೆ.
ಸ್ನಾನದ ನಂತರ ಚೆನ್ನಾಗಿ ಶರೀರವನ್ನು ಒರೆಸಿ:
ಸ್ನಾನದ ನಂತರ ಚರ್ಮವನ್ನು ಚೆನ್ನಾಗಿ ಒರೆಸಿ, ಇದರಿಂದ ಫಂಗಲ್ ಸೋಂಕಾಗುವುದನ್ನು ತಪ್ಪಿಸಬಹುದು.ನಿಧಾನವಾಗಿ, ಮೃದುವಾಗಿ ಒರೆಸಿದರೆ ಒಳ್ಳೆಯದು.
ಐಸ್ ಕ್ಯೂಬ್ಸ್ ಹಚ್ಚುತ್ತಿರಿ:
ತಕ್ಷಣಕ್ಕೆ ಉರಿ, ತುರಿಕೆ ಕಡಿಮೆಯಾಗಲು ಮಂಜುಗಡ್ದೆಯನ್ನು ಒಂದು ಬಟ್ಟೆ ಸುತ್ತಲ್ಲಿ ಸುತ್ತಿ ನಿಧಾನವಾಗಿ ಬೆವರುಸಾಲೆಯ ಮೇಲೆ ಹಚ್ಚುತ್ತಿದ್ದರೆ ಸ್ವಲ್ಪ ತಂಪಾಗುತ್ತದೆ ಮತ್ತು ಆ ಕ್ಷಣದ ಉರಿ, ತುರಿಕೆಯನ್ನು ಕಡಿಮೆ ಮಾಡುತ್ತದೆ.
ಅಲೋವೇರ ಜೆಲ್ ಉಪಯೋಗಿಸಿ:
ಅಲೋವೇರ ಜೆಲ್ ತಂಪುಕಾರಕವಾಗಿದ್ದು ಉರಿಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಲೋವೇರ ಗಿಡವನ್ನು ಮನೆಯಲ್ಲಿ ಬೆಳೆಸಿ, ಅದರ ಜೆಲ್ ತೆಗದು ಬೆವರುಸಾಲೆ ಇರುವ ಜಾಗದ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ಮೃದುವಾದ ಟವೆಲ್ ನಿಂದ ಒರೆಸಿದರೆ ಬೆವರುಸಾಲೆ ಕಡಿಮೆಯಾಗಿ ಹಿತವಾದ ಅನುಭವ ನೀಡುತ್ತದೆ.
ಸೌತೆಕಾಯಿ ಬಳಸಿ:
ಸೌತೆಕಾಯಿ ಬೇಸಿಗೆಗೆ ಅತ್ಯುತ್ತಮ ಆಹಾರ, ಇದು ತಿನ್ನುವುದಕ್ಕೆ ಮಾತ್ರವಲ್ಲ ಚರ್ಮದ ರಕ್ಷಣೆಗೂ ಉತ್ತಮ. ಇದನ್ನು ನುಣ್ಣಗೆ ರುಬ್ಬಿ, ಚರ್ಮದ ಮೇಲೆ ಹಚ್ಚಿದರೆ ಚರ್ಮವು ತಂಪಾಗಿ ಬೆವರುಸಾಲೆ ಕಡಿಮೆಯಾಗುತ್ತದೆ.
ಕಹಿಬೇವಿನ ಎಲೆ:
ಇದು ಚರ್ಮದ ಅನೇಕ ಸೊಂಕುಗಳಿಗೆ ರಾಮಬಾಣ. ಬೆವರುಸಾಲೆಯನ್ನು ಸಂಪೂರ್ಣವಾಗಿ ಹೊಡೆದೊಡಿಸಲು ಕಹಿಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿ ಹಚ್ಚಿಕೊಂಡು 15 ನಿಮಿಷ ಬಿಟ್ಟು ಒದ್ದೆ ಬಟ್ಟೆಯಲ್ಲಿ ಒರೆಸಿದರೆ ಸಾಕು. ಕಹಿಬೇವು ಚರ್ಮಕ್ಕೆ ಅಲರ್ಜಿ ಅನಿಸಿದರೆ ಮೊದಲು ಸ್ವಲ್ಪ ಕೈಯ ಮೇಲೆ ಹಚ್ಚಿ ನೋಡಿಕೊಳ್ಳಬಹುದು.
Comments are closed.