ಕರಾವಳಿ

‘ಮರಳು ನೀಡಿ, ಇಲ್ಲ ಉಡುಪಿ ಜಿಲ್ಲೆ ಬಿಡಿ’: ಮರಳು ಸಮಸ್ಯೆ ನಿವರಣೆಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸಬೇಕೆಂದು ಆಗ್ರಹಿಸಿ ಕಳೆದ ಆರು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿತು. ಸಾವಿರದಷ್ಟು ಕಾರ್ಮಿಕರು, ಮರಳು ಸಾಗಾಟ ವಾಹನಗಳ ಮಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಮಸ್ಯೆ ಪರಿಹಾರಕ್ಕೆ ಇಚ್ಚಾಶಕ್ತಿ ತೋರದ ಡಿಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಾವಿರಕ್ಕೂ ಮಿಕ್ಕಿದ ಲಾರಿಗಳ ಸಮೇತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬರುವ ಬಗ್ಗೆ ಲಾರಿ ಮಾಲಕರು ನಿರ್ಧರಿಸಿದ್ದರು. ಆದರೆ ಅವರ ಯೋಜನೆಯ ಮಾಹಿತಿ ಪೊಲೀಸರಿಗೆ ತಿಳಿದ ಪರಿಣಾಮ ಲಾರಿಗಳು ಉಡುಪಿ ನಗರ ಪ್ರವೇಶಿಸದಂತೆ ಭಾನುವಾರ ತಡರಾತ್ರಿಯೇ ತಡೆಯಲಾಗಿತ್ತು. ಉದ್ಯಾವರ, ಎಂಜಿಎಂ ಕಾಲೇಜು ಬಳಿ ಬ್ಯಾರಿಕೇಡ್‌ಗಳನ್ನು, ಕೆಲವೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಟಿಪ್ಪರ್ ಹಾಗೂ ೪೦೭ ಲಾರಿಗಳನ್ನು ಮುಂದೆ ಹೋಗದಂತೆ ತಡೆಯಲಾಗಿತ್ತು. ನೂರಾರು ಲಾರಿಗಳನ್ನು ರವಿವಾರ ತಡರಾತ್ರಿ ಮತ್ತು ಸೋಮವಾರ ಬೆಳಗ್ಗೆ ಉದ್ಯಾವರ, ಎಂಜಿಎಂ, ಕೋಟ, ಬ್ರಹ್ಮಾವರ ಮೊದಲಾದೆಡೆ ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡಲಾಯಿತು. ಕಾರ್ಕಳ ಭಾಗದವರ ಲಾರಿಗಳನ್ನು ಕಾರ್ಕಳ ತಾಲೂಕು ಕಚೇರಿ ಬಳಿ ತಡೆಹಿಡಿಯಲಾಯಿತು.

Comments are closed.