ಕರಾವಳಿ

ಮೋದಿಯವರ ಜನಪರ ಆಡಳಿತವನ್ನು ವಿಶ್ವವೇ ಶ್ಲಾಘಿಸಿದೆ: ನಟಿ ತಾರಾ

Pinterest LinkedIn Tumblr

ಕುಂದಾಪುರ: ಇಂದು ಇಡೀ ವಿಶ್ವವೇ ಪ್ರಧಾನಿ ಮೋದಿಯವರ ಜನಪರವಾದ ಆಡಳಿತವನ್ನು ಶ್ಲಾಘಿಸುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಕಡೆಗಳಲ್ಲೂ ಬಿಜೆಪಿ ಪರ ಅಲೆ ಇದೆ. ಎಲ್ಲರೂ ಮೋದಿಜಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂದು ಹಂಬಲಿಸುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಬಹುದೊಡ್ಡ ಮುನ್ನಡೆಯಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಎಮ್‌ಎಲ್‌ಸಿ, ಬಿಜೆಪಿ ಮಹಿಳಾ ನಾಯಕಿ ತಾರಾ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಪ್ರಚಾರಕ್ಕಾಗಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರು, ಗುರುವಾರ ಬಿಜೆಪಿ ಬೈಂದೂರು ಕ್ಷೇತ್ರ ಕಚೇರಿಯಲ್ಲಿ ನಡೆಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಯಾವುದೇ ಹೊಸ ಯೋಜನೆಗಳಾಗಲಿ, ಹೊಸ ಅನುದಾನಗಳನ್ನಾಗಲಿ ಕೊಡುವಂತಹ ಕೆಲಸಕ್ಕೆ ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿ ಸರ್ಕಾರ ಮುಂದಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಂದಿರುವಂತಹ ಅನೇಕ ಜನಪರವಾದ ಯೋಜನೆಗಳನ್ನು ಮುಚ್ಚಿ ಹಾಕುವ ಕೆಲಸವನ್ನು ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಮಾಡಿದೆ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗದ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಬಹುಶಃ ಮೈತ್ರಿ ಸರ್ಕಾರವನ್ನು ಉರುಳಿಸಲು ನಾವು ಕೆಲಸ ಮಾಡಬೇಕಿಲ್ಲ. ಅವರೇ ಉರುಳಿಸಿಕೊಳ್ಳುತ್ತಾರೆ ಎಂದು ತಾರಾ ಲೇವಡಿಯಾಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ನಂಬಿಕೆ ನಮಗೆಲ್ಲರಿಗೂ ಇದೆ. ಗೆಲುವಿನ ಅಂತರವನ್ನು ಹೆಚ್ಚು ಮಾಡಬೇಕು. ಜಾಸ್ತಿ ಅಂತರದ ಗೆಲುವು ರಾಘವೇಂದ್ರ ಅವರಿಗೆ ಸಿಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.‌ಎಮ್ ಸುಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಿದ್ದರು.

Comments are closed.