ಕರಾವಳಿ

ಸಚಿವ ಖಾದರ್ ಪುತ್ರಿ ಹಾಫಿಝಾ ಅಂತರಾಷ್ಟ್ರೀಯ ದುಬೈ ಹೋಲಿ ಕುರಾನ್ ಅವಾರ್ಡ್ ಗೆ ಆಯ್ಕೆ: ಭಾರತದ ಏಕೈಕ ಪ್ರತಿನಿಧಿ

Pinterest LinkedIn Tumblr

ಮಂಗಳೂರು : ದುಬೈಯಲ್ಲಿ ನವೆಂಬರ್ 4 ರಿಂದ 16 ರವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ ಅಂತರಾಷ್ಟ್ರೀಯ ದುಬೈ ಹೋಲಿ ಕುರಾನ್ ಅವಾರ್ಡ್ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪತ್ನಿಯಾಗಿದ್ದು ಮದರ್ ಆಫ್ ಯುಎಇ ಎಂಬ ಖ್ಯಾತಿ ಅವರಿಗಿದೆ.ಅವರ ಹೆಸರಲ್ಲಿ 2016 ನವೆಂಬರ್ ನಲ್ಲಿ ಪ್ರಾರಂಭವಾದ ಈ ಹೋಲಿ ಕುರಾನ್ ಅವಾರ್ಡ್ ಗೆ ವಿಶ್ವದ ನಾನಾ ದೇಶದ ಪವಿತ್ರ ಕುರಾನ್ ಕಂಠಪಾಠ ಮಾಡಿರುವ ಮಹಿಳಾ ಸ್ಪರ್ಧಾಳುಗಳು ಭಾಗವಹಿಸುತ್ತಾರೆ.

ಈ ಪವಿತ್ರ ಕುರಾನ್ ಸ್ಪರ್ಧೆಯು ದುಬೈಯ ಅಲ್ ಮಮ್ಝಾರ್ ಸೈಂಟಿಫಿಕ್ ಕಲ್ಚರಲ್ ಅಸೋಸಿಯೇಶನ್ ನಲ್ಲಿ ನಡೆಯಲಿದೆ. ಸ್ಪರ್ಧೆಗೆ ಪೂರ್ವಭಾವಿಯಾಗಿ ಆರು ತಿಂಗಳ ಕಾಲ ನಡೆದ ವಿವಿಧ ಪ್ರಕ್ರಿಯೆಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಭಾರತದಿಂದ ಹವ್ವಾ ಅವರನ್ನು ಯುಎಇ ಸರಕಾರ ಆಯ್ಕೆ ಮಾಡಿದೆ

ಕೆಲ ವರ್ಷಗಳ ಹಿಂದೆ ಯು.ಟಿ.ಖಾದರ್ ದಂಪತಿ ಪವಿತ್ರ ಮಕ್ಕಾ ಯಾತ್ರೆ ತೆರಳಿದ್ದರು. ಆವಾಗ ಹವ್ವಾ ನಸೀಮಾ ಚಿಕ್ಕ ಬಾಲಕಿ. ಮಕ್ಕಾದಲ್ಲಿ ಕಾಬಾ ಆರಾದನಾಲಯ ಸುತ್ತಾಟದ ವೇಳೆ ಜನಜಂಗುಳಿ ಮಧ್ಯೆ ಪುತ್ರಿ ಹವ್ವಾ ನಸೀಮಾ ಖಾದರ್ ದಂಪತಿಯ ಕೈತಪ್ಪಿಸಿಕೊಂಡು ಕಣ್ಮರೆಯಾಗಿದ್ದರು.

ಎಲ್ಲೆಡೆ ಹುಡುಕಾಡಿ ಪ್ರಯತ್ನ ಕೈಚೆಲ್ಲಿದ ಖಾದರ್ ದಂಪತಿ ದೇವರನ್ನು ಪ್ರಾರ್ಥಿಸುತ್ತಾ ಕಣ್ಮರೆಯಾದ ಮಗಳು ಸಿಕ್ಕರೆ ಆಕೆಗೆ ಕುರಾನ್ ಕಂಠ ಪಾಠ ಮಾಡಿಸುವ ಹರಕೆ ಹೊತ್ತರು.

ದೇವರಿಗೆ ಈ ಹರಕೆ ಪ್ರಾರ್ಥನೆ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಒಬ್ಬ ವಯಸ್ಕರೊಂದಿಗೆ ಹವ್ವಾ ಪ್ರತ್ಯಕ್ಷರಾದರು. ಈ ಘಟನೆ ನಡೆದ ನಂತರ ಹವ್ವಾ ನಸೀಮಾ ಅವರು ತನ್ನ ಲೌಕಿಕ ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ 3 ವರ್ಷಗಳ ಪವಿತ್ರ ಕುರಾನ್ ಕಂಠಪಾಠಕ್ಕಾಗಿ ಕಾಸರಗೋಡಿನ ಅಡ್ಕತ್ತಬೈಲ್ ಹಾಗೂ ದೇರಳಕಟ್ಟೆಯ ಮದ್ರಸುತ್ತಿಬಿಯಾನ್ ಧಾರ್ಮಿಕ ವಿದ್ಯಾಸಂಸ್ಥೆಗೆ ಸೇರಿದರು. ಅಲ್ಲಿ ವಿದ್ಯೆ ಕಲಿತ ನಂತರ ಹಾಫಿಝಾ ಬಿರುದು ಪಡೆದಿದ್ದಾರೆ.

ಇನ್ನು ಹೆಚ್ಚಿನ ಧಾರ್ಮಿಕ ವಿದ್ಯೆಯೊಂದಿಗೆ ಲೌಕಿಕ ವಿದ್ಯಾಭ್ಯಾಸವನ್ನೂ ಮುಂದುವರೆಸುವ ಸಲುವಾಗಿ ಹವ್ವಾ ನಸೀಮಾ ಅವರು ಕಳೆದ ಎರಡು ವರ್ಷಗಳಿಂದ ಕೇರಳದ ಮಲಪ್ಪುರಂನಲ್ಲಿರುವ ಕಡಲುಂಡಿ ಖಲೀಲ್ ತಂಙಳ್ ಅವರ ನೇತೃತ್ವದ ಮಅದಿನ್ ಕ್ಯೂಲ್ಯಾಂಡ್ ಸಂಸ್ಥೆಯಲ್ಲಿ ದಾಖಲಾಗಿದ್ದಾರೆ.ಪ್ರಸ್ತುತ ಅಲ್ಲಿ ಹೆಚ್ಚಿನ ವಿದ್ಯಾರ್ಜನೆ ಪಡೆಯುತ್ತಾ ಮಕ್ಕಳಿಗೆ ಕುರಾನ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ

Comments are closed.