ಮಂಗಳೂರು, ಡಿಸೆಂಬರ್. 19 : ಪ್ರಸಕ್ತ ವರ್ಷದ ಕರಾವಳಿ ಉತ್ಸವಕ್ಕೆ ಡಿ.21 ಶುಕ್ರವಾರದಂದು ಚಾಲನೆ ದೊರಕಲಿದೆ.ಇದರ ಅಂಗವಾಗಿ ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ನೆಹರೂ ಮೈದಾನದಿಂದ ಹೊರಡಲಿದ್ದು, ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದವರೆಗೆ ಸಂಚರಿಸಲಿದೆ. ಸಂಜೆ 6 ಗಂಟೆಗೆ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಇವುಗಳಿಗೆ ಚಾಲನೆ ನೀಡಲಿದ್ದಾರೆ.
ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಲಿದ್ದಾರೆ. ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ನಗರದ ವಿವಿಧ ಕಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವಸ್ತುಪ್ರದರ್ಶನ: ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಡಿ. 21ರಿಂದ 45 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್‍ಮೆಂಟ್‍ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಇರಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ: ಕರಾವಳಿ ಉತ್ಸವದ ಪ್ರಮುಖ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಲ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್ ಎರಡು ಕಡೆ ನಡೆಯಲಿವೆ. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಕಲಾವಿದರ, ಖ್ಯಾತಿವೆತ್ತ ಕಲಾ, ಸಾಂಸ್ಕೃತಿಕ ತಂಡಗಳಿಂದ, ಕಲಾವಿದರಿಂದ ಆಕರ್ಷಕ, ಕಾರ್ಯಕ್ರಮಗಳು ನಡೆಯಲಿವೆ. ಯುವ ಉತ್ಸವ, ನಗೆ ಹಬ್ಬ, ಸಂಗೀತ, ನೃತ್ಯ, ನಾಟಕ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಕ್ರೀಡಾ ಪಂದ್ಯಾಟಗಳು: ಕರಾವಳಿ ಉತ್ಸವ ಅಂಗವಾಗಿ ಜ. 28 ರಂದು ಕರಾವಳಿ ಉತ್ಸವ ಮೈದಾನ ಪಕ್ಕದಲ್ಲಿ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಮುಕ್ತ ಹ್ಯಾಂಡ್‍ಬಾಲ್, ಬಾಕ್ಸಿ ಪಂದ್ಯಾವಳಿ, ವಿಕಲಚೇತನರ ಕ್ರೀಡಾಕೂಟ, ಲಗೋರಿ ಪಂದ್ಯಾಟ ನಡೆಯಲಿದೆ.
ಜ.29ರಂದು ನಗರದ ಡಾನ್ ಬಾಸ್ಕೋ ಹಾಲ್‍ನಲ್ಲಿ ಪುರುಷರ ಹಾಗೂ ಮಹಿಳೆಯರಿಗೆ ಮುಕ್ತ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ನಗದು ನೀಡಲಾಗುವುದು. ಶಾಲಾ ಕಾಲೇಜುಗಳ ಆಸಕ್ತ ಕ್ರೀಡಾ ಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಬೀಚ್ ಉತ್ಸವ: ಬೀಚ್ ಉತ್ಸವವು ಜನವರಿ 28ರಿಂದ 30ರವರೆಗೆ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಅನುಭವಿ ನೃತ್ಯ ತಂಡಗಳಿಂದ ಆಕರ್ಷಕ ನೃತ್ಯ ಸ್ಪರ್ಧೆ, ಸಂಗೀತ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ, ಬೆಳಿಗ್ಗೆ ಬೀಚ್ ವಾಲಿಬಾಲ್ ಪಂದ್ಯಾಟ, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ, ಡ್ರಮ್ ಜಾಮ್ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಕರ್ಷಕ ತಿಂಡಿ ತಿನಿಸುಗಳ ಆಹಾರೋತ್ಸವ ಕೂಡಾ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ.
ಜ.22ರಿಂದ 24ರವರೆಗೆ ಕದ್ರಿ ಪಾರ್ಕ್‍ನಲ್ಲಿ ಮಂಗಳೂರಿನ ಇತಿಹಾಸ, ಪರಂಪರೆ ಸಾರುವ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ. ಅದೇ ರೀತಿ, ಸ್ವಾತಂತ್ರ್ಯಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳ ಕೃತಿಗಳ ಮಾಹಿತಿ ಮತ್ತು ಪ್ರದರ್ಶನ ಕೂಡಾ ಇರಲಿದೆ.
ಜ.30ರಂದು ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಸಮಾರೋಪ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಬಳಿಕ ಖ್ಯಾತ ಸಂಗೀತಗಾರ ಮಣಿಕಾಂತ್ ಕದ್ರಿ ಲೈವ್ ನಡೆಯಲಿದೆ.
ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕರಾವಳಿ ಉತ್ಸವವನ್ನು ಯಶಸ್ಸುಗೊಳಿಸಲು ದ.ಕ. ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ
Comments are closed.