ನಾಸಿಕ್ : ‘ವ್ಯಕ್ತಿಯೊಬ್ಬ ಸತತ ಪರಿಶ್ರಮದಿಂದ ಎಷ್ಟೇ ಸಂಪತ್ತು, ಸ್ಥಾನ-ಮಾನ,ಕೀರ್ತಿ ಸಂಪಾದಿಸಿದರೂ ಅದರಿಂದ ವೈಯಕ್ತಿಕ ಏಳ್ಗೆ ಸಾಧ್ಯ; ಹೊರತು ಸಮಾಜಕ್ಕೆ ದೊಡ್ಡ ಲಾಭವಾಗದು. ಆದರೆ ನಿಸ್ವಾರ್ಥ ಭಾವದಿಂದ ತನ್ನ ಸಮುದಾಯದ ಅಭಿವೃದ್ಧಿಗೆ ಕಿಂಚಿತ್ತಾದರೂ ದುಡಿದಾಗ ಆತ ಜನರಿಂದ ಗುರುತಿಸಲ್ಪಡುತ್ತಾನೆ. ಅಂತಹ ಸಾಧಕರಿಂದ ಸಮಾಜಕ್ಕೆ ಗೌರವ ಪ್ರಾಪ್ತವಾಗುವುದು’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ, ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ನಗರದ ಶಾಲಿಮಾರ್ ಸಾಲ್ಖೇಡ್ಕರ್ ನಾಟ್ಯ ಮಂದಿರದಲ್ಲಿ ಇತ್ತೀಚೆಗೆ ಜರಗಿದ ನಾಸಿಕ್ ಬಂಟರ ಸಂಘದ13 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಅತಿಥಿಯಾಗಿ ಅವರು ಮಾತನಾಡಿದರು. ‘ ತವರೂರಿಂದ ಬರಿಗೈಯಲ್ಲಿ ಹೋದ ಮಂದಿ ಹೊರನಾಡಲ್ಲಿ ಹೊಟ್ಟೆ ಪಾಡಿಗಾಗಿ ದುಡಿದು ತಮ್ಮ ಸಂಪಾದನೆಯ ಒಂದು ಭಾಗವನ್ನು ತಾಯ್ನಾಡಿನ ಸಂಸ್ಕೃತಿಯ ಪ್ರಸರಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ. ತಾವು ಹೋದಲ್ಲೆಲ್ಲಾ ಸಂಘಟನೆಗಳ ಮೂಲಕ ತಮ್ಮ ಮೂಲ ನೆಲೆಗಳನ್ನು ಗಟ್ಟಿಗೊಳಿಸಿ ಒಗ್ಗಟ್ಟಿನಿಂದ ಬಾಳುವ ಬಂಟ ಬಂಧುಗಳು ಇತರರಿಗೆ ಮಾದರಿಯಾಗಿದ್ದಾರೆ’ ಎಂದವರು ನುಡಿದರು.
ಶಾಶ್ವತ ಯೋಜನೆ ರೂಪಿಸಿ:
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲಬೆಟ್ಟು ಸಂತೋಷ್ ಶೆಟ್ಟಿ ಅವರು ‘ ಸಂಘ ಸಂಸ್ಥೆಗಳು ಕೇವಲ ಉತ್ಸವಾಚರಣೆಗಳಿಂದ ತೃಪ್ತಿ ಪಟ್ಟುಕೊಂಡರೆ ಸಾಲದು. ಎಲ್ಲರೂ ಒಂದೇ ಮನಸ್ಸಿನಿಂದ ದುಡಿದು ತಮ್ಮವರ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಬೇಕು’ ಎಂದರು. ವರ್ಷದ ಹಿಂದೆ ಪುಣೆ ಬಂಟರ ಭವನ ನಿರ್ಮಾಣವಾದ ಬಗ್ಗೆ ತಮ್ಮ ಸ್ವಾನುಭವವನ್ನು ಅವರು ವಿವರಿಸಿದರು.ನಾಸಿಕ್ ಬಂಟರ ಸಂಘದ ಅಧ್ಯಕ್ಷ ಇ.ಭಾಸ್ಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಮ್ಮಾನ:
ಇದೇ ಸಂದರ್ಭದಲ್ಲಿ ಅತಿಥಿಗಳಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂತೋಷ್ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ರವಿರಾಜ ಶೆಟ್ಟಿ ಮತ್ತು ಲಾವಣ್ಯ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಲಿಂಗಪ್ಪ ಶೆಟ್ಟಿ, ಪೂರ್ವಾಧ್ಯಕ್ಷರುಗಳಾದ ರಾಜಗೋಪಾಲ್ ಶೆಟ್ಟಿ, ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಜೆ.ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶಿತ್ ಶೆಟ್ಟಿ ಪ್ರಸ್ತಾವನೆಗೈದು ವಂದಿಸಿದರು. ಪ್ರದೀಪ್ ರೈ ಮತ್ತು ಸುಚಿತ್ರ ರೈ ನಿರೂಪಿಸಿದರು. ಪ್ರತಿ ರೈ, ಪ್ರಭಾ ಆರ್.ಶೆಟ್ಟಿ, ಅಮಿತ್ ಶೆಟ್ಟಿ ಸಹಕರಿಸಿದರು.
ಸಾಂಸ್ಕೃತಿಕ ವೈವಿಧ್ಯ:
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀಕಟೀಲು ತಂಡ, ಕುಶಿ ಡಿ.ಶೆಟ್ಟಿ, ಹರ್ಷಿತ ಆಳ್ವ, ರಕ್ಷಾ ಶೆಟ್ಟಿ ಮತ್ತು ಬಳಗದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನವಿತ್ತು. ಅಲ್ಲದೆ ಐರೋಲಿ ತುಳುಕೂಟದವರಿಂದ ‘ಭೂತಾಳಪಾಂಡ್ಯ’ ನಾಟಕ ಹಾಗೂ ನಟಸಾಮ್ರಾಟ್ ನಾಸಿಕ್ ತಂಡದಿಂದ ಪುಣ್ಯಕೋಟಿ ಕಥೆಯನ್ನಾಧರಿಸಿದ ‘ಸತ್ಯಮೇವ ಜಯತೇ’ ಯಕ್ಷಗಾನ ಜರಗಿತು.
Comments are closed.