ಕುಂದಾಪುರ: ಕೋಟ ಸಮೀಪದ ಮಣೂರಿನಲ್ಲಿ ಜ.26 ರ ತಡರಾತ್ರಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 16 ಆರೋಪಿಗಳ ಪೈಕಿ ಜಾಮೀನು ನೀಡುವಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಮೂವರು ಆರೋಪಿಗಳಿಗೆ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಡಿ.ಎ.ಆರ್. ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಕಾಲೇಜು ವಿದ್ಯಾರ್ಥಿ ಪ್ರಣವ್ ರಾವ್ ಎನ್ನುವರಿಗೆ ಜಾಮೀನು ನೀಡುವಂತೆ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಶುಕ್ರವಾರ ಸಂಜೆ ಇಲ್ಲಿನ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಕುರಿತು ವಾದ ಮಂಡಿಸಿದ್ದರು. ಪ್ರಾಸಿಕ್ಯೂಶನ್ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್ ಶನಿವಾರ ವಾದ ಮಂಡಿಸಿ ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು.
ಆರೋಪಿಗಳ ಪರ ಹಾಗೂ ಪ್ರಾಸಿಕ್ಯೂಶನ್ ಪರವಾಗಿ ನಡೆದ ವಾದಗಳನ್ನು ಆಲಿಸಿದ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ ಅವರು ಫೆ.19 ಕ್ಕೆ (ಮಂಗಳವಾರ) ಜಾಮೀನು ಅರ್ಜಿಯ ಮೇಲೆ ಆದೇಶ ನೀಡುವುದಾಗಿ ಪ್ರಕಟಿಸಿದ್ದು ಮೂವರ ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಆದೇಶಿಸಿದ್ದಾರೆ. ಇನ್ನೂ ಕೂಡ ಪ್ರಕರಣ ತನಿಖಾ ಹಂತದಲ್ಲಿದ್ದು ಆರೋಪಿತರು ಕೃತ್ಯದಲ್ಲಿ ಸಂಚು ನಡೆಸಲು ಭಾಗಿಯಾಗಿರುವ ಶಂಕೆಯಿರುವ ಕಾರಣ ಈಗಲೇ ಯಾವುದೇ ನಿರ್ಧಾರಕೈಗೊಳ್ಳುವುದು ಸೂಕ್ತವಲ್ಲ. ಕೊಲೆಗೆ ಸಂಚು ರೂಪಿಸಿದ್ದು ಹೆಚ್ಚಿನ ತನೀಕೆಯಲ್ಲಿ ಕಂಡುಬಂದರೆ ಅದು ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಅಲ್ಲದೇ ಆರೋಪಿತರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಕಾರಣ ಒಂದೊಮ್ಮೆ ಜಾಮೀನು ನೀಡಿದಲ್ಲಿ ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆಯೂ ಇರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ಪೊಲೀಸ್ ಪವನ ಅಮೀನ್ ಕಸ್ಟಡಿಗೆ..
ಪ್ರಕರಣದ 10ನೇ ಆರೋಪಿ ಪೊಲೀಸ್ ಸಿಬ್ಬಂದಿಯಾಗಿದ್ದ ಪವನ್ ಅಮೀನ್ ಎನ್ನುವಾತನನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಡಬಲ್ ಮರ್ಡರ್ ಪ್ರಕರಣದಲ್ಲಿ ಇತರ ಆರೋಪಿಗಳು ಕೊಲೆ ಮಾಡಿದ್ದು ಗಮನದಲ್ಲಿದ್ದು ಪ್ರಮುಖ ಆರೋಪಿಗಳು ತಲೆ ಮರೆಸಿಕೊಳ್ಳಲು ನೇರವಾಗಿ ಸಹಕರಿಸಿ ಚಿಕ್ಕಮಗಳುರಿನ ಮಲ್ಲಂದೂರು ಎಂಬಲ್ಲಿ ಸಂಬಂಧಿಗಳ ಮನೆಯಲ್ಲಿ ಉಳಿದುಕೊಳ್ಳಲು ಸಹಕರಿಸಿದ್ದ. ಅಲ್ಲದೇ ಪ್ರಮುಖ ಆರೋಪಿಗಳಳು ಉಪಯೋಗಿಸಿದ ಮೂರು ಮೊಬೈಲ್ ಫೋನುಗಳ ವಶಕ್ಕೆ ಪಡೆಯಬೇಕಿರುವುದರಿಂದ ಇನ್ನಷ್ಟು ಮಾಹಿತಿ ಕಲೆಹಾಕಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಆರೋಪಿಗಳ ಬಂಧನ ಆಗಬೇಕಿರುವ ಹಿನ್ನೆಲೆ ಆರೋಪಿ ಪವನನ್ನು ಇನ್ನಷ್ಟು ವಿಚಾರಣೆ ನಡೆಸಿ ಇತರರ ಬಗ್ಗೆ ಮಾಹಿತಿ ಪಡೆದು ಬಂಧಿಸಬೇಕಾಗಿದೆ. ಅದಕ್ಕಾಗಿ ಈತನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ತನಿಖಾಧಿಕಾರಿ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
Comments are closed.