ಮಂಗಳೂರು ಮಹಾನಗರ ಪಾಲಿಕೆಯ 53 ನೇ ಬಜಾಲು ವಾರ್ಡಿನಲ್ಲಿ ಅಂದಾಜು ಮೊತ್ತ 15 ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು 2018-19 ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಯ ಅಡಿಯಲ್ಲಿ 53 ನೇ ಬಜಾಲು ವಾರ್ಡಿನ ಜಯನಗರದಿಂದ ಜಲ್ಲಿಗುಡ್ಡೆಗೆ ಹೋಗುವ ಅಡ್ಡರಸ್ತೆಗೆ ಕಾಂಕ್ರೀಟಿಕರಣ, ಚರಂಡಿ ಮತ್ತು ತಡೆಗೋಡೆಯ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ.
ಈಗಾಗಲೇ ಅಲ್ಪಸಂಖ್ಯಾತ ಅಭಿವೃದ್ಧಿ ನಿಧಿಯಲ್ಲಿ ಇನ್ನು ಹೆಚ್ಚಿನ ಮೊತ್ತಕ್ಕಾಗಿ ಪ್ರಸ್ತಾಪ ಕಳುಹಿಸಿದ್ದೇನೆ. ಈಗ ಮಂಜೂರುಗೊಂಡಿರುವ 15 ಲಕ್ಷ ರೂಪಾಯಿಗಳೊಂದಿಗೆ ಇನ್ನೂ ಕನಿಷ್ಟ 40 ಲಕ್ಷ ರೂಪಾಯಿಗಳು ಈ ಭಾಗಕ್ಕೆ ಬರುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿ ಸಂಪೂರ್ಣ ಕಾಂಕ್ರೀಟಿಕರಣ ನಡೆಸಲಾಗುವುದು.
ಕಳೆದ 25-30 ವರ್ಷಗಳಿಂದ ಈ ಭಾಗದ ಜನರು ಇಲ್ಲಿ ಸೂಕ್ತ ರಸ್ತೆಯಿಲ್ಲದೆ ತುಂಬಾ ಕಷ್ಟಪಟ್ಟಿದ್ದಾರೆ. ರಸ್ತೆ ಕಾಂಕ್ರೀಟಿಕರಣವಾದರೆ ನಾಗರಿಕರು ಅನಾರೋಗ್ಯಕ್ಕೆ ಒಳಗಾದಾಗ ಅವರ ಮನೆಯ ತನಕ ಆಟೋರಿಕ್ಷಾ ಬರುವಂತೆ ಆಗಿ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು.
ಶಾಸಕರೊಂದಿಗೆ ಮಾಜಿ ಕಾರ್ಪೋರೇಟರ್ ಅಶ್ರಫ್, ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ, ಸ್ಥಳೀಯರಾದ ಚಂದ್ರಶೇಖರ್, ಶಿವಾಜಿ ರಾವ್, ವೇಣುಗೋಪಾಲ್, ಕೀರ್ತನ್, ಆಜೀರಾ, ಪೌಜಿಯಾ, ವಿಶಾಲ್, ಭಾರತಿ, ಭಾಸ್ಕರ್ ಸಹಿತ ಅನೇಕರು ಉಪಸ್ಥಿತರಿದ್ದರು.
Comments are closed.