ಕರಾವಳಿ

ಅಶಕ್ತ ಮತದಾರರಿಗೆ ಚುನಾವಣಾ ಬೂತ್ ತಲುಪಲು ವಾಹನ ವ್ಯವಸ್ಥೆ: ಸಿಂಧೂ ಬಿ.ರೂಪೇಶ್

Pinterest LinkedIn Tumblr

ಉಡುಪಿ: ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರು, ಅಶಕ್ತರು ಮತದಾನದಿಂದ ಹೊರಗುಳಿಯಬಾರದು ಎಂಬ ಕಾರಣಕ್ಕೆ ಅಶಕ್ತ ಮತದಾರರಿಗೆ ಆಯಾ ಚುನಾವಣಾ ಬೂತ್ ತಲುಪುವಂತೆ ವಾಹನ ವ್ಯವಸ್ಥೆ ಮಾಡಲಾಗಿದ್ದು, ಮತದಾರರಿಗೆ ಆಯಾ ಬೂತ್ಗಳಲ್ಲಿ ವೀಲ್ ಚೇರ್, ಮ್ಯಾಗ್ನೆಫೈಯಿಂಗ್ ಗ್ಲಾಸ್ಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ ರೂಪೇಶ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಕಲ ಚೇತನ ಮತ್ತು ಅಶಕ್ತ ಮತದಾರಿಗೆ ಸ್ವೀಪ್ ಸಮಿತಿ ವತಿಯಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸುವುದು ಹಾಗೂ ಇನ್ನು ಹೆಚ್ಚುವರಿ ಯಾವುದೇ ಸೌಲಭ್ಯ ಬೇಕಾದರೂ ಅವರಿಂದ ಮಾಹಿತಿ ಪಡೆದು ಕೊಂಡು ಸ್ವೀಪ್ ಸಮಿತಿ ಗಮನಕ್ಕೆ ತರುವಂತೆ ತಿಳಿಸಿದರು.

ಚುನಾವಣಾ ಅವಧಿಯಲ್ಲಿ ಸಾಲು ಸಾಲು ರಜೆಗಳು ಇರುವ ಕಾರಣ ಮತದಾರರು ತಪ್ಪಿಹೋಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದ ಅವರು ಯಾವುದೇ ಕಾರಣಕ್ಕೂ ಮತದಾರರು ಕಡಿಮೆಯಾಗಲು ಬಿಡಬಾರದು ಎಂದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾರ್ಯಕ್ರಮ ಮಾಡುವಾಗ ಜಾಗರೂಕರಾಗಿ ಮಾಡುವಂತೆ ಸಲಹೆ ನೀಡಿದರು. ಸ್ವೀಪ್ ಸಮಿತಿ ವತಿಯಿಂದ ಮಾಡುವ ಕಾರ್ಯಕ್ರಮಗಳು ಇರುವಾಗ ರ್ಯಾಲಿ ಮಾಡಬಹುದು ಆದರೆ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿರಬಾರದು.ಮತ ಹಾಕುವಂತೆ ಪ್ರೇರೇಪಿಸುವುದು ಮಾತ್ರ ನಮ್ಮ ಕರ್ತವ್ಯವಾಗಬೇಕು ಯಾವ ವ್ಯಕ್ತಿಗೆ ಮತ ಹಾಕ ಬೇಕು ಎನ್ನುವುದು ಮತದಾರರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಡಬೇಕು. ಉತ್ತಮ ಯೋಜನೆ ಹೊಂದಿರುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದ್ದು ಯಾವುದೇ ರಾಜಕೀಯ ತಿರುವು ಪಡೆದುಕೊಳ್ಳಬಾರದು ಎಂದರು.

ಮತದಾನದ ಜಾಗೃತಿ ಕುರಿತಾಗಿ ಮಾಡುವ ಕಾರ್ಯಕ್ರಮಗಳು ಪಾರದರ್ಶಕವಾಗಿರಬೇಕು. ಯಾವುದೇ ಕಾರ್ಯಕ್ರಮ ಮಾಡುವ ಮೊದಲು ಅದು ನೀತಿ ಸಂಹಿತೆಗೆ ಬದ್ಧವಾಗಿದೆಯೇ ಎಂಬುದನ್ನು ತಿಳಿದು ಕಾರ್ಯಕ್ರಮ ಆಯೋಜನೆ ಮಾಡಬೇಕು. ಸಾಮಾಜಿಕ ಜಾಲ ತಾಣದಲ್ಲಿ ಯಾವುದೇ ರೀತಿಯ ರಾಜಕೀಯ ಪ್ರೇರಿತ ಸಂದೇಶಗಳನ್ನು ವರ್ಗಾಯಿಸದಂತೆ ಸೂಚನೆ ನೀಡಿದರು. ವಿಆರ್ಡಬ್ಲ್ಯೂಗಳು ತಮ್ಮ ಪಂಚಾಯತ್ ವ್ಯಾಪ್ತಿಯ ಅಂಗವಿಕಲರಿಗೆ ಇವಿಎಂ ಮತಯಂತ್ರದ ಬಗ್ಗೆ ಅಣುಕು ಮತದಾನ ಕಾರ್ಯಕ್ರಮ ನಡೆಸಿ ಪ್ರತಿಜ್ಞಾವಿಧಿ ನಡೆಸಬೇಕು ಹಾಗೂ ಈ ಕಾರ್ಯಕ್ರಮ ನಡೆಸಿರುವ ಕುರಿತು ಮಾಹಿತಿಯನ್ನು ಸ್ವೀಪ್ ಸಮಿತಿಗೆ ನೀಡುವಂತೆ ತಿಳಿಸಿದರು. ಪ್ರತಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ವಿಆರ್ಡಬ್ಲ್ಯೂಗಳು ಮತದಾನದ ಜಾಗೃತಿ ನೀಡುವಂತಹ ಕಾರ್ಯಕ್ರಮ ನಡೆಸುವುದು ಆಧ್ಯತೆಯ ವಿಷಯವಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ಹೆಮ್ಮೆಯ ವಿಚಾರವೆಂದು ಭಾವಿಸಿ ಗೌರವಿಸಬೇಕು. ಅಂತೆಯೇ ಬೇರೆಯವರು ಮತದಾನ ಮಾಡಲು ಪ್ರೇರೇಪಿಸಬೇಕು. ವಿಆರ್ಡಬ್ಲ್ಯೂಗಳಿರುವ 80 ಪಂಚಾಯತ್ನಲ್ಲಿ ಯಾವುದೇ ಮತದಾರರು ಬಾಕಿ ಉಳಿಯಬಾರದು. ವಿಆರ್ಡಬ್ಲ್ಯೂಗಳಿಗೆ ತಮ್ಮ ವ್ಯಾಪ್ತಿಯ ವಿಕಲ ಚೇತನರ ಜವಾಬ್ದಾರಿ ಇದ್ದು ಅವರು ಮತದಾರಿಗೆ ಮತ ಚಲಾಯಿಸಲು ಇರುವ ವ್ಯವಸ್ಥೆಗಳ ಬಗ್ಗೆ ತಿಳಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. ಈಗಾಗಲೇ ಯಾವ ಯಾವ ಪ್ರದೇಶದಲ್ಲಿ ಎಷ್ಟು ಮತದಾರಿದ್ದಾರೆ ಎಂಬ ಪಟ್ಟಿ ಸಿದ್ದಗೊಂಡಿದ್ದು, ಈ ಬಗ್ಗೆ ಶೀಘ್ರದಲ್ಲಿ ತಿಳಿಸಲಾಗುವುದು ಎಂದರು. ಆಯಾ ಪಂಚಾಯತ್ ವ್ಯಾಪ್ತಿಯ ಎಷ್ಟು ಮಂದಿಗೆ ಮತದಾರರ ಚೀಟಿ ಸಿಕ್ಕಿದೆ. ಎಷ್ಟು ಮಂದಿಯ ಚೀಟಿ ಪ್ರೊಸೆಸ್ನಲ್ಲಿದೆ ಹಾಗೂ ಎಷ್ಟು ಮಂದಿ ಇನ್ನೂ ಹೆಸರು ಸೇರಿಸಲು ಬಾಕಿ ಇದೆ ಎಂಬುದರ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.

ಮತದಾನದ ದಿನದಂದು ಆಯಾ ಪ್ರದೇಶದ ವಿಆರ್ಡಬ್ಲ್ಯೂಗಳು ಯಾವುದೇ ಗೊಂದಲಕ್ಕೆ ಅನುವು ಮಾಡಿಕೊಡದೆ ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಸೇವೆ ಮಾಡುವ ಮನೋಭಾವದಿಂದ ಅವರನ್ನು ಚುನಾವಣಾ ಬೂತ್ಗಳಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕು. ಮತದಾನದ ದಿನದಂದು ತಮ್ಮ ವ್ಯಾಪ್ತಿಯ ಬೂತ್ಗಳಲ್ಲಿ ಯಾವುದೇ ಹಿರಿಯ ನಾಗರಿಕರು, ಅತೀ ಹೆಚ್ಚು ಬಾರಿ ಮತದಾನ ಮಾಡಿದ ಹಿರಿಯರು, ಅಂಧರು ಅಥವಾ ಅಸೌಖ್ಯದಿಂದ ಇರುವವರು ಮತದಾನ ಮಾಡಲು ಬಂದಿದ್ದರೆ, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಚಿತ್ರ ಅಥವಾ ವಿಡಿಯೋವನ್ನು ಸಮಿತಿಗೆ ಸಲ್ಲಿಸುವಂತೆ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ್ ತಿಳಿಸದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ನಗರ ಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.

Comments are closed.