ಮಂಗಳೂರು: ‘ ಯೋಗ ಶಿಕ್ಷಣದಿಂದ ಶುದ್ಧವಾದ ಜೀವನ ನಡೆಸಲು ಸಾಧ್ಯ. ಅದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟ ಯೋಗ ಶಿಕ್ಷಕ. ದಿ.ನಾರಾಯಣ ಶೆಟ್ಟರದು ಮಾದರಿ ವ್ಯಕ್ತಿತ್ವ. ತನ್ನ ಅನಾರೋಗ್ಯವನ್ನು ಮೆಟ್ಟಿ ನಿಂತು ನೂರಾರು ಯೋಗ ಪಟುಗಳನ್ನು ಸಮಾಜಕ್ಕೆ ಅರ್ಪಿಸಿದ ಅವರಿಂದು ಕೀರ್ತಿಕಾಯರಾಗಿ ಜನಮಾನಸದಲ್ಲಿ ಅಮರರಾಗಿದ್ದಾರೆ’ ಎಂದು ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ದಿ.ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ.) ಮಂಗಳೂರು ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ಜರಗಿದ ‘ಕೆ.ಎನ್.ಶೆಟ್ಟಿ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಸಂಸ್ಮರಣಾ ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ನ್ಯೂಸ್ ಬ್ಯೂರೋ ಚೀಫ್ ಮನೋಹರ ಪ್ರಸಾದ್ ಮಾತನಾಡಿ ‘ ದಿ.ಕೆ.ಎನ್.ಶೆಟ್ಟಿ ಅವರು ಅಧ್ಯಾಪಕರಾಗಿ, ಯೋಗ ಗುರುವಾಗಿ, ಸಾಮಾಜಿಕ ಸಂಘಟಕರಾಗಿ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ’ ಎಂದರು.
ಇದೇ ಸಂದರ್ಭದಲ್ಲಿ ಯೋಗ ಗುರು ಡಾ . ಜ್ನಾನೇಶ್ವರ್ ನಾಯಕ್ ಅವರನ್ನು 2018-19 ನೇ ಸಾಲಿನ ‘ಕೆ.ಎನ್.ಶೆಟ್ಟಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯ್ತು.
ಆಸರೆ ಚ್ಯಾರಿಟೇಬಲ್ ಟ್ರಸ್ಟ್ ನ ಡಾ.ಆಶಾಜ್ಯೋತಿ ರೈ ಮತ್ತು ಬಾಯಾರಿನ ಕೆ.ಮೋನಪ್ಪ ಶೆಟ್ಟಿ ಅತಿಥಿಗಳಾಗಿದ್ದರು. ಭಾರತಿ ಎನ್.ಶೆಟ್ಟಿ ಮತ್ತು ಅಭಿಷೇಕ್ ಉಪಸ್ಥಿತರಿದ್ದರು.
ದಿ.ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿಯ ಏಕನಾಥ ಬಾಳಿಗಾ ಸ್ವಾಗತಿಸಿದರು. ಸನಾತನ ನಾಟ್ಯಾಲಯದ ಕೆ.ಚಂದ್ರಶೇಖರ ಶೆಟ್ಟಿ ಪ್ರಸ್ತಾವನೆಗೈದರು. ಧನಂಜಯ್ ವಂದಿಸಿದರು. ಸುಕೇಶ್ ಚೌಟ ನಿರೂಪಿಸಿದರು.
ಬಳಿಕ ಪತಂಜಲಿ ಯೋಗ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಹಾಗೂ ಅಯನ ಪೆರ್ಲ ಅವರಿಂದ ಶಾಸ್ತ್ರೀಯ ಭರತನಾಟ್ಯ ಜರಗಿತು.
Comments are closed.