ಒಂದು ವೇಳೆ ನಿಮ್ಮ ಇಂದಿನ ದಿನದ ಪ್ರಾರಂಭದಿಂದಲೇ ಎಲ್ಲವೂ ಸರಿ ಇರಬೇಕೆಂದಿದ್ದರೆ ಕಳೆದ ರಾತ್ರಿಯಿಂದಲೇ ಈ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ವಹಿಸುವುದು ಜಾಣತನದ ಕ್ರಮ. ತ್ವಚೆಯ ಆರೈಕೆಗೂ ಈ ಸೂತ್ರ ಅನ್ವಯಿಸುತ್ತದೆ. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಅರಿತುಕೊಳ್ಳೋಣ….
ಪ್ರಾರಂಭ ಹೀಗಿರಲಿ
ಮೊದಲಾಗಿ, ನೀವು ಮಲಗಲು ಹೋಗುವ ಮುನ್ನ ಮುಖದ ಮೇಕಪ್ ಅನ್ನು ಪೂರ್ಣವಾಗಿ ನಿರಾವಿಸುವುದು ಅತ್ಯಗತ್ಯ! ಎಂದಿಗೂ, ಎಷ್ಟೇ ಆಯಾಸವಾಗಿದ್ದರೂ ಸರಿ, ಮೇಕಪ್ ನಿವಾರಿಸದೇ ಮಲಗದಿರಿ. ಈ ಮಾತನ್ನು ನಿಮ್ಮ ತಾಯಿ ನಿಮ್ಮ ಹದಿಹರೆಯದಲ್ಲಿಯೇ ಹೇಳಿದ್ದಿರಬಹುದು! ಇದು ಅವಶ್ಯ ಏಕೆಂದರೆ ನಮ್ಮ ತ್ವಚೆಯ ಸೂಕ್ಷ್ಮರಂಧ್ರಗಳು ಮೇಕಪ್ ನಿಂದಾಗಿ ಮುಚ್ಚಿರುತ್ತವೆ ಹಾಗೂ ಮೇಕಪ್ ನಿವಾರಣೆಯಾಗದೇ ಇದ್ದರೆ ಇವುಗಳ ಪ್ರಮುಖ ಕಾರ್ಯ ನಿರ್ವಹಣೆಯಾಗುವುದಾದರೂ ಹೇಗೆ? ಆರ್ದ್ರತೆ ಚರ್ಮದೊಳಗೆ ಆಗಮಿಸುವುದು ಹಾಗೂ ಚರ್ಮದಡಿಯ ಅಧಿಕ ಪ್ರಮಾಣದ ತೈಲ ಮತ್ತು ಇತರ ಕಲ್ಮಶಗಳು ನಿವಾರಣೆಯಾಗುವುದು ಇಲ್ಲಿಂದಲೇ ತಾನೇ? ಅದೂ ರಾತ್ರಿ ಮಲಗಿದ ಬಳಿಕವೇ ಈ ಕಾರ್ಯ ಜರುಗಬೇಕಾದುದರಿಂದ ಮೇಕಪ್ ನಿವಾರಣೆ ಅನಿವಾರ್ಯ! ಒಂದು ವೇಳೆ ಸೋಮಾರಿತನದಿಂದ ಹಾಗೇ ಮಲಗಿದರೆ ಈ ಕಲ್ಮಶಗಳು ಒಳಗೇ ಉಳಿದು ಸೋಂಕು ಉಂಟಾಗುತ್ತದೆ ಹಾಗೂ ಇವು ಬೆಳೆದು ಮೊಡವೆ ಹಾಗೂ ಚರ್ಮ ತಾತ್ಕಾಲಿಕವಾಗಿ ಊದಿಕೊಳ್ಳುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಊದಿಕೊಂಡ ಕಣ್ಣುಗಳ ಕೆಳಭಾಗ ನಿಮ್ಮ ಕಾಂಟ್ಯಾಕ್ಟ್ ಲೆನ್ಸ್ ಧರಿಸಲೂ ಕಷ್ಟಕರವಾಗಿಸುತ್ತದೆ.
ಮೇಕಪ್ ನಿವಾರಿಸಲು
ಹಾಗಾಗಿ ಜಾಣೆಯರು ಮೇಕಪ್ ನಿವಾರಿಸಲು ಸೂಕ್ತ ಪ್ರಸಾಧನಗಳನ್ನು ಬಳಸುತ್ತಾರೆ. ಮುನ್ನ ಮೇಕಪ್, ಕೊಳೆ, ಎಣ್ಣೆಪಸೆ ಹಾಗೂ ಇತರ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ. ಈ ಆಲ್ಕೋಹಾಲ್ ರಹಿತ ಮತ್ತು ಮೃದು ಬಟ್ಟೆಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗಿನಿಂದಲೂ ಕಲ್ಮಶಗಳನ್ನು ನಿವಾರಿಸಿ ರಾತ್ರಿ ಸಮಯದಲ್ಲಿ ತಮ್ಮ ಕಾರ್ಯವನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗಲು ನೆರವಾಗುತ್ತವೆ. ಅಲ್ಲದೇ ಒಣಗಿರುವ ಮೇಕಪ್ ಹಾಗೂ ಜಲನಿರೋಧಕ ಮಸ್ಕಾರಾವನ್ನೂ ನಿವಾರಿಸಲು ಈ ಸಾಮಾಗ್ರಿಗಳು ಸಮರ್ಥವಾಗಿವೆ. ಬಳಿಕ ಟೋನರ್ ದ್ರವವನ್ನು ಬಳಸಿ ಮುಖವನ್ನು ತೊಳೆದುಕೊಳ್ಳಿ, ನಂತರ ತೈಲರಹಿತ ತೇವಕಾರಕ (oil-free moisturizer) ವನ್ನು ತೆಳುವಾಗಿ ಹಚ್ಚಿಕೊಂಡ ಬಳಿಕ ಮಲಗಿ ನಿದ್ರಿಸಿ.
ಮಲಗುವ ಸಮಯದಲ್ಲಿ ಈ ಮುನ್ನೆಚ್ಚರಿಕೆ ವಹಿಸಿ
ನಿಮ್ಮ ತಲೆದಿಂಬಿನ ಹೊರಗಿನ ಹೊದಿಕೆಯನ್ನು ಆಗಾಗ ಬದಲಿಸುತ್ತಿರಿ. ಏಕೆಂದರೆ ಈ ಬಟ್ಟೆಯಲ್ಲಿಯೂ ಸೂಕ್ಷ್ಮ ಧೂಳು ಮತ್ತು ಗಾಳಿಯಲ್ಲಿ ತೇಲಿಬರುವ ಇತರ ಸೂಕ್ಷ್ಮ ಕ್ರಿಮಿಗಳಿರುತ್ತವೆ. ಇವು ತ್ವಚೆಯ ಸೂಕ್ಷ್ಮರಂಧ್ರಗಳಲ್ಲಿ ಆಗಮಿಸಿ ಸೋಂಕು, ಉರಿ ಮತ್ತು ಇತರ ತೊಂದರೆಗಳನ್ನುಂಟುಮಾಡಬಹುದು.
ಕೈ ಮತ್ತು ಕಾಲುಗಳ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಿ
ಕೇವಲ ಮುಖ ಮಾತ್ರವಲ್ಲ, ಕೈ ಮತ್ತು ಕಾಲುಗಳ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಿ. ಒಂದು ವೇಳೆ ನಿಮ್ಮ ಪಾದಗಳು ಒಣದಾಗಿದ್ದು ಬಿರುಕು ಮೂಡಿದ್ದರೆ ಮಲಗುವ ಮುನ್ನ ವ್ಯಾಸೆಲಿನ್ ಅಥವಾ moisturizing body lotion ಅನ್ನು ದಪ್ಪನಾಗಿ ಹಚ್ಚಿಕೂಂಡು ದಪ್ಪನೆಯ, ಸ್ವಚ್ಛ ಹತ್ತಿಯ ಕಾಲುಚೀಲಗಳನ್ನು ಧರಿಸಿ ಮಲಗಿ. ಅಲ್ಲದೇ ಹಸ್ತ, ಕೈಗಳು ಮತ್ತು ಕಾಲುಗಳಿಗೂ ಉತ್ತಮ ತೇವಕಾರಕ ಪ್ರಸಾಧನ ಹಚ್ಚಿ ಮಲಗಿ .ವಿಶೇಷವಾಗಿ ಚಳಿಗಾಲದಲ್ಲಿ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾಗುವ ಮೂಲಕ ಒಣದಾಗುತ್ತದೆ ಹಾಗೂ ಇದರಿಂದಲೂ ತ್ವಚೆ ಒಣಗುವ ಸಾಧ್ಯತೆ ಇದೆ.
ಮುಂಜಾನೆ ಎದ್ದ ಬಳಿಕ ನಿಮ್ಮ ದಿನಚರಿ ಹೀಗಿರಲಿ
ನಿಮ್ಮ ಮುಖದ ತ್ವಚೆಗೆ ಆವಿಯನ್ನು ಸೋಕಿಸುವ ಮೂಲಕ ಸ್ನಾನ ಪ್ರಾರಂಭಿಸಿ. ಇದಕ್ಕಾಗಿ ಹಬೆಯ ಯಂತ್ರ ಇದ್ದರೆ ಸೂಕ್ತ. ಇಲ್ಲದೇ ಇದ್ದರೆ ಬಿಸಿನೀರಿನಲ್ಲಿ ಮುಳುಗಿಸಿ ಹಿಂಡಿದ ದಪ್ಪ, ಸ್ವಚ್ಛ ಟವೆಲ್ ಅನ್ನು ಮುಖಕ್ಕೆ ಒತ್ತಿಕೊಂಡು ಕೆಲವು ನಿಮಿಷಗಳ ಕಾಲ ಆದಷ್ಟೂ ಬಿಸಿ ಮುಖಕ್ಕೆ ತಾಕುವಂತೆ ಮಾಡಿ.
ಕ್ಲೀನ್ಸರ್
ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆಯನ್ನುನಿವಾರಿಸುವ ಕ್ರಮವೇ ಕ್ಲೀನ್ಸಿಂಗ್. ಹೀಗೆ ಉಳಿದ ಕೊಳೆಯೇ ಚರ್ಮದ ಸೋಂಕು, ಬ್ಲಾಕ್ ಹೆಡ್ ಹಾಗೂ ಮೊಡವೆಗಳಿಗೆ ಕಾರಣ. ಕ್ಲೀನ್ಸಿಂಗ್ ಮೂಲಕ ಈ ಕೊಳೆ ನಿರ್ಮೂಲನೆಯಾಗುವ ಜೊತೆಗೇ ಚರ್ಮದಡಿಯ ಭಾಗದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳಲೂ ನೆರವಾಗುತ್ತದೆ. ಪರಿಣಾಮವಾಗಿ ತ್ವಚೆ ನವಚೈತನ್ಯ ಪಡೆದು ಆರೋಗ್ಯಕರ ಕಾಂತಿಯಿಂದ ಮಿನುಗುತ್ತದೆ.
ತ್ವಚೆಗೆ ಹೊಂದುವ ಕ್ಲೀನ್ಸರ್ ಉಪಯೋಗಿಸಿ
ಇದಕ್ಕಾಗಿ, ನಿಮ್ಮ ತ್ವಚೆಗೆ ಹೊಂದುವ ಕ್ಲೀನ್ಸರ್ ದ್ರಾವಣವನ್ನು ಉಪಯೋಗಿಸಿ. ಯಾವುದಾದರೊಂದು ಉತ್ತಮ ಗುಣಮಟ್ಟದ ಕ್ಲೀನ್ಸರ್ ಉಪಯೋಗಿಸುವ ಮೂಲಕ ಕಳಾರಹಿತ ಮತ್ತು ಆಯಾಸಗೊಂಡಿದ್ದ ತ್ವಚೆ ಮತ್ತೊಮ್ಮೆ ಆರೋಗ್ಯಕರ ಮತ್ತು ಕಾಂತಿಯುಕ್ತವಾಗುತ್ತವೆ. ಈ ಉತ್ಪನ್ನಗಳಲ್ಲಿ ನೈಸರ್ಗಿಕ ಲಿಂಬೆ, ಅನಾನಾಸು ಮತ್ತು ಚಕ್ಕೋತ ಹಣ್ಣುಗಳ ರಸಗಳನ್ನು ಬಳಸಲಾಗಿದ್ದು ತ್ವಚೆ ನವಚೈತನ್ಯ ಪಡೆಯಲು ನೆರವಾಗುತ್ತವೆ. ಕೇವಲ ಸೂಕ್ಷ್ಮರಂಧ್ರಗಳ ಸ್ವಚ್ಛತೆಗೆ ಮಾತ್ರವಲ್ಲ, ತ್ವಚೆಯ ಸಂವೇದನೆ ಉತ್ತಮಗೊಳ್ಳಲೂ ಈ ಪ್ರಸಾಧನಗಳು ಉತ್ತಮವಾಗಿವೆ.
ಟೋನರ್
ಸಾಮಾನ್ಯವಾಗಿ ಈ ಅಗತ್ಯ ವಿಧಾನವನ್ನು ಹೆಚ್ಚಿನ ಮಹಿಳೆಯರು ತಪ್ಪಿಸಿಕೊಳ್ಳುತ್ತಾರೆ. ಆದರೆ ಇದು ಚರ್ಮದ ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಸಮತೋಲನದ ಮಟ್ಟ) ವನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ ಹಾಗೂ ಈ ಮೂಲಕ ಅಗತ್ಯ ತೇವವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಆಲ್ಕೋಹಾಲ್ ರಹಿತ ಟೋನರ್ ಗಳನ್ನು ಆಯ್ದುಕೊಳ್ಳಿ. ಏಕೆಂದರೆ ಮದ್ಯ ತ್ವಚೆಯಿಂದ ಆರ್ದ್ರತೆಯನ್ನು ಆವಿಯಾಗಿಸಿ ತ್ವಚೆಯನ್ನು ಒಣದಾಗಿಸುತ್ತದೆ. ಇದೇ ಅಗತ್ಯತೆಯನ್ನು ಗಮನಿಸಿದ ಹಲವಾರು ಸಂಸ್ಥೆಗಳು ಸೂಕ್ಷ್ಮ ಸಂವೇದನೆ ಹೊಂದಿರುವ ಅಥವಾ ಮೊಡವೆ ಸುಲಭವಾಗಿ ಎದುರಾಗುವ ತ್ವಚೆಯ ವ್ಯಕ್ತಿಗಳಿಗೆಂದೇ ವಿಶೇಷವಾದ ಪ್ರಸಾದನಗಳನ್ನು ಬಿಡುಗಡೆಗೊಳಿಸಿವೆ. ಈ ದ್ರವದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಹಿಂಡಿ ಮುಖ ಮತ್ತು ಕುತ್ತಿಗೆಯನ್ನು ಒರೆಸಿಕೊಳ್ಳಿ ಮತ್ತು ಇದು ತಾನಾಗಿಯೇ ಒಣಗಲು ಬಿಡಿ. ಕೆಲವರು ಟವೆಲ್ಲಿನಿಂದ ತಕ್ಷಣವೇ ಒರೆಸಿ ತೇವಕಾರಕವನ್ನು ಹಚ್ಚಿಕೊಳ್ಳುತ್ತಾರೆ, ಹೀಗೆ ಮಾಡದಿರಿ, ಗಾಳಿಯೇ ಈ ದ್ರವವನ್ನು ಒಣಗಿಸುವವರೆಗೆ ತಾಳ್ಮೆ ವಹಿಸಿ.
ತೇವಕಾರಕ (Moisturizer)
ತ್ವಚೆ ಮೃದು, ಕಲೆರಹಿತ ಹಾಗೂ ಕಾಂತಿಯುಕ್ತವಾಗಿರುವುದು ಎಲ್ಲರಿಗೂ ಇಷ್ಟವಾಗಿದೆ. ಒಂದು ವೇಳೆ ನಿಮ್ಮದು ಎಣ್ಣೆಚರ್ಮವಾಗಿದ್ದರೂ ಸರಿ, ತೇವಕಾರಕ ನಿಮಗೂ ಉಳಿದ ಎಲ್ಲರಂತೆ ಅವಶ್ಯವಾಗಿದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ತೇವಕಾರಕವನ್ನು ಆಯ್ದುಕೊಳ್ಳಿ. ಒಂದು ವೇಳೆ ಈ ಉತ್ಪನ್ನ ಸೂರ್ಯನ ಕಿರಣಗಳ ವಿರುದ್ದ ರಕ್ಷಣೆ ಒದಗಿಸುವಂತಾದರೆ ಇನ್ನೂ ಒಳ್ಳೆಯದು. ಆದರೆ ಇದು ಕೇವಲ ಆರ್ದ್ರತೆ ಮತ್ತು ರಕ್ಷಣೆಯನ್ನು ನೀಡಬೇಕೇ ವಿನಃ ಎಣ್ಣೆಪಸೆಯನ್ನು ತ್ವಚೆಯ ಮೇಲೆ ಉಳಿಸುವಂತಿರಬಾರದು. ನಿಮ್ಮ ಆಯ್ಕೆಯ ತೇವಕಾರಕ ದ್ರವವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ವಿಶೇಷವಾಗಿ ಕಣ್ಣುಗಳ ಸುತ್ತ ಮತ್ತು ತುಟಿಗಳಿಗೆ ಹೆಚ್ಚಾಗಿ ಹಚ್ಚಿಕೊಳ್ಳಿ, ಏಕೆಂದರೆ ಈ ಭಾಗಗಳಲ್ಲಿ ಚರ್ಮದ ಹೊರಪದರ ಮತ್ತು ಕೆಳಪದರ ಅತಿ ನಿಕಟವಾಗಿದ್ದು ಈ ಭಾಗಗಳೇ ಅತಿ ಸುಲಭವಾಗಿ ಒಣಗುವ ಮತ್ತು ಕಪ್ಪಗಾಗುವ ಸಾಧ್ಯತೆ ಹೊಂದಿರುತ್ತವೆ.
Comments are closed.