ಕರಾವಳಿ

ಉಡುಪಿಯಲ್ಲಿ ವಿಶಿಷ್ಠ ರೀತಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ

Pinterest LinkedIn Tumblr

ಉಡುಪಿ: ಸಾಮಾನ್ಯವಾಗಿ ಸರಕಾರದ ವತಿಯಿಂದ ಆಚರಿಸುವ ಎಲ್ಲಾ ಜಯಂತಿಗಳನ್ನು ದೀಪ ಹಚ್ಚುವುದರ ಮೂಲಕ, ಭಾವಚಿತ್ರ/ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸುವುದು ವಾಡಿಕೆ..

ಆದರೆ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ ಮತ್ತು ಪಂಗಡದ ಸಂಘಟನೆಗಳು ಉಡುಪಿ ಇವರ ಸಹಯೋಗದಲ್ಲಿ , ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಭಾನುವಾರ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ , ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಕಾರ್ಯಕ್ರಮ ಉದ್ಘಾಟನೆ ನಂತರ , ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಂತೆ , ಹ್ಯಾಪಿ ಬರ್ತ್ ಡೇ ಅಂಬೇಡ್ಕರ್ ಎಂಬ ಕೇಕ್ ಕತ್ತರಿಸುವ ಮೂಲಕ ಹಾಗೂ ಈ ಕೇಕ್ ನ್ನು ಅಂಬೇಡ್ಕರ್ ಜಯಂತಿಯಂದು ಜನಿಸಿದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯ ಕತ್ತರಿಸುವ ಮೂಲಕ , ಪ.ಜಾತಿ ಮತ್ತು ಪಂಗಡದ ಸಂಘಟನೆಗಳ ಪದಾಧಿಕಾರಿಗಳ ಜೊತೆಯಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳಲ್ಲಿ ಸಮಾನತೆ ಇರಬೇಕುವ ಎನ್ನುವ ಆಶಯ ಹೊಂದಿದ್ದು, ಅವರ ಆಶಯದಂತೆ, ಚುನಾವಣೆ ಎನ್ನುವುದು ಸಮಾನತೆಯ ಸಂಕೇತವಾಗಿದೆ, ಚುನಾವಣೆಯಲ್ಲಿ ಜಾತಿ ಭೇದವಿಲ್ಲದೆ, ಪುರುಷ, ಮಹಿಳೆ , ಅಂಗವಿಕಲರು, ತೃತೀಯ ಲಿಂಗಿಗಳು ಎಲ್ಲರಿಗೂ ಸಮನಾದ ಅವಕಾಶ ನೀಡಲಾಗಿದೆ, ಅಂಬೇಡ್ಕರ್ ಅವರ ಆಶಯದಂತೆ, ಜಿಲ್ಲಾಡಳಿತ ವತಿಯಿಂದ ಜಿಲ್ಲೆಯಲ್ಲಿನ ಶೋಷಿತರು, ಬಲಹೀನರು, ಅವಕಾಶ ವಂಚಿತರಿಗೆ , ಸೌಲಭ್ಯ ವಂಚಿತ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ವಾಸುದೇವ ಬೆಳ್ವೆ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳಿಗೆ ಸಮಾನ ಆದ್ಯತೆ ನೀಡಿದ್ದರು, ಅಧಿಕಾರ ವಿಕೇಂದ್ರಿಕರಣ, ಆದರ್ಶ ರಾಜ್ಯದ ಪರಿಕಲ್ಪನೆ ಹೊಂದಿದ್ದರು, ಅಧಿಕಾರ ಎನ್ನುವುದು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ದೊರೆಯಬೇಕು, ಜಾತಿ ಮುಖ್ಯ ಅಲ್ಲ ಸಮಾನತೆ ಮುಖ್ಯ ಎನ್ನುವ ಚಿಂತನೆ ಅವರದ್ದಾಗಿತ್ತು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕರಿ ಸಿಂಧೂ ಬಿ ರೂಪೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೌರಾಯುಕ್ತ
ಆನಂದ್ ಕಲ್ಲೋಳಿಕರ್, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಗಣೇಶ್ ವಿ., ವಿಶ್ವನಾಥ ಪೇತ್ರಿ, ಚಂದ್ರ ಅಲ್ತಾರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಭುಜಬಲಿ ಪಾಸಾನೆ ಸ್ವಾಗತಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರಿಗೆ ಅಂಬೇಡ್ಕರ್ ಬರ್ತ್ ಡೇ ಕೇಕ್ ವಿತರಿಸಲಾಯಿತು.

Comments are closed.