ಕುಂದಾಪುರ: ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಕಾರ್ಮಿಕರ ಮೂಲಭೂತ ಸಮಸ್ಯೆ, ಅಸಮಾಧಾನ, ಅತೃಪ್ತಿ ಕಡಿಮೆಯಾಗಿಲ್ಲ. ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಧೋರಣೆಯಿಂದ ಕಾರ್ಮಿಕರ ಶೋಷಣೆ ನಿಂತಿಲ್ಲ. ಕಾರ್ಮಿಕ ಸಂಘಟನೆಗಳು ಮೂಲಕ ಕನಿಷ್ಟ ಕೂಲಿ ಸೌಲಭ್ಯಗಳ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಾರ್ಮಿಕರ ಸಂಘಟನೆಗಳಲ್ಲಿ ಹೆಚ್ಚು ಹೆಚ್ಚು ಕಾರ್ಮಿಕರು ತೊಡಗಿಸಿಕೊಳ್ಳುವ ಮೂಲಕ ಕಾರ್ಮಿಕ ವಲಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಹೇಳಿದರು.
ಕುಂದಾಪುರ ಸಿಐಟಿಯು ಹಾಗೂ ವಿವಿಧ ಸಂಘಟನೆ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ಬುಧವಾರ ನಡೆದ ಪುರ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ದೇಶದಲ್ಲಿ ಮತೀಯ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಗೆ ಮುಂದಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದೆ. ಸಾಮಾಜ್ಯಶಾಹಿ, ಬಂಡವಾಳಶಾಹಿ ನಡುವೆ ಸಿಲುಕಿದ ಕಾರ್ಮಿಕ ಇನ್ನೂ ಕಷ್ಟ ಕೂಲಿ ಪಡೆಯಲಾಗಿಲ್ಲ ಎಂದರೆ ಅದಕ್ಕಿಂತ ದೊಡ್ಡ ದೌರ್ಭಾಗ್ಯ ಮತ್ತೊಂದಿಲ್ಲ. ಇದರೊಟ್ಟಿಗೆ ನೌಕರಶಾಹಿ ಆಡಳಿತ ಕಾರ್ಮಿಕ ವಲಯಕ್ಕೆ ದೊಡ್ಡ ಅಪಾಯತರಲಿದೆ ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಹೆಚ್.ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ ವಿ.ನರಸಿಂಹ, ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ಯು.ದಾಸ ಭಂಡಾರಿ, ಬೀಡಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಾಹಾಬಲ ವಡೇರ ಹೋಬಳಿ, ಬೀಡಿ ಕಾರ್ಮಿಕ ಸಂಘಟನೆ ಪ್ರಧಾನ ಕಾರ್‍ಯದರ್ಶಿ ಬಲ್ಕೀಸ್ ಭಾನು, ಅಂಗನವಾಡಿ ಕಾರ್‍ಯಕರ್ತರ ಸಂಘ ಅಧ್ಯಕ್ಷ ರತಿ ಶೆಟ್ಟಿ, ಆಟೋರಿಕ್ಷ ಯೂನಿಯನ್ ಅಧ್ಯಕ್ಷ ಲಕ್ಷ್ಮಣ ಬರೇಕಟ್ಟೆ, ಡಿವೈಎಫ್‌ವೈ ಮುಖಂಡ ರಾಜೇಶ್ ಮಠದಬೆಟ್ಟು, ಅಕ್ಷರದಾಸೋಹ ಸಂಘಟನೆ ಅಧ್ಯಕ್ಷೆ ನಾಗರತ್ನಾ, ಕೃಷಿ ಕೂಲಿ ಕಾರ್ಮಿಕ ಸಂಘ ಪ್ರಧಾನ ಕಾರ್‍ಯದರ್ಶಿ ನಾಗರತ್ನಾ, ಮಹಿಳಾ ಸಂಘಟನೆ ಮುಖ್ಯಸ್ಥೆ ಶೀಲಾವತಿ ಇದ್ದರು.
ಕಟ್ಟಡ ಕಾರ್ಮಿಕ ಸಂಘ ಪ್ರಧಾನ ಕಾರ್‍ಯದರ್ಶಿ ಸುರೇಶ್ ಕಲ್ಲಾಗರ ಸ್ವಾಗತಿಸಿದರು. ಗುಲ್ವಾಡಿ ಕಾರ್ಮಿಕ ಸಂಘಟನೆ ಮುಖ್ಯಸ್ಥ ರಮೇಶ್ ಗುಲ್ವಾಡಿ ನಿರೂಪಿಸಿದರು.
Comments are closed.