ದುಡಿಮೆಯ ಬೆನ್ನತ್ತಿ ಸಾಗುತ್ತಿರುವ ಇಂದಿನ ಪೀಳಿಗೆಯ ಜನರು, ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ದಿನ ನಿತ್ಯ ಸೇವಿಸುವ ಆಹಾರ ಹೆಚ್ಚು ಪೌಷ್ಠಿಕತೆಯಿಂದ ಪೋಷಕಾಂಶಗಳಿಂದ ಇರುವಂತೆ ಕಾಳಜಿ ವಹಿಸಬೇಕು. ಆ ಮೂಲಕ ದೈಹಿಕ ಆರೋಗ್ಯ ಸದೃಢವಾಗಿರುವಂತೆ ನೋಡಿಕೊಳ್ಳಬೇಕು.
ಮನೆಯಲ್ಲಿ ಕೂತು ತಿನ್ನುವ ಕಾಲ ಬದಲಾಗಿದೆ ಎಂದೇ ಹೇಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು, ಗಂಡು ಎನ್ನದೆ ಎಲ್ಲರೂ ದುಡಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಮ್ಮ ಆರೋಗ್ಯದತ್ತ ಕಾಳಜಿ ವಹಿಸಲೇಬೇಕಲ್ಲವೆ. ಕೆಲಸಕ್ಕೆ ಹೋಗುವ ಮಂದಿ, ತಮ್ಮ ಕಛೇರಿಗಳಿಗೆ ಮಧ್ಯಾಹ್ನದ ಊಟಕ್ಕೆಂದು ಊಟದ ಡಬ್ಬಿ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಊಟದ ಡಬ್ಬಿಯಲ್ಲಿನ ಆಹಾರ ಪದಾರ್ಥ ಪೌಷ್ಠಿಕತೆಯಿಂದ ಕೂಡಿದ್ದರೆ ಚೆಂದ.
ನಿತ್ಯ ಅನ್ನ ಸಾರು, ಚಪಾತಿ ? ಪಲ್ಯ ಕೊಂಡೊಯ್ಯುವುದರ ಜತೆಗೆ ಮಧ್ಯಾಹ್ನದ ಊಟಕ್ಕೆ ಬೇಯಿಸಿದ ಮೊಟ್ಟೆಯೊಂದು ಸೇರಿದರೆ ನೀವು ಶಕ್ತಿಶಾಲಿಯಾಗಿರಲು ಅರ್ಥಾತ್, ದೃಢಕಾಯರಾಗಿರಲು ಸಹಕಾರಿಯಾಗುತ್ತದೆ.
ದಿನಕ್ಕೊಂದು ಮೊಟ್ಟೆ ತಿನ್ನಿ
`ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ’ ಎಂಬ ಮಾತಿನಂತೆ, ದಿನಕ್ಕೊಂದು ಮೊಟ್ಟೆ ತಿನ್ನಿ, ನಿಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಿ ಎಂಬ ಸಲಹೆ, ವಿವಿಧ ಅಧ್ಯಯಗಳಿಂದ ಹೊರಹೊಮ್ಮಿದೆ.
ಕೈಗೆಟಕುವ ಬೆಲೆಯಲ್ಲಿ ಮೊಟ್ಟೆಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ. ದುಬಾರಿ ಆಹಾರ ಪದಾರ್ಥಗಳಿಗಿಂತ ಅಗ್ಗದ ದರದ ಮೊಟ್ಟೆ ನಮ್ಮ ದೇಹದ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗುವ ಜತೆಗೆ, ನಮ್ಮ ದೇಹದ ಮೇಲೆ ದಾಳಿಯಿಡುವ ರೋಗಗಳನ್ನು ದೂರವಿಡುವಲ್ಲಿಯೂ ಸಹಕಾರಿಯಾಗಿದೆ.
ಅಗಾಧ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಮೊಟ್ಟೆಯಲ್ಲಿವೆ. ಅಲ್ಲದೇ, ಇದರಲ್ಲಿರುವ ಪೆÇಸ್ಪೊರಸ್, ವಿಟಮಿನ್ ಬಿ -12, ರಿಬೊಫ್ಲಾವಿನ್, ಚಾಲಿನ್ ಮತ್ತು ಆಮಿನೊ ಆಸಿಡ್‍ನ ಪ್ರಮಾಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಉಪಯುಕ್ತವಾಗಿದೆ.
ಮೊಟ್ಟೆಯಲ್ಲಿ ಕೇವಲ 78 ಕ್ಯಾಲರಿ ಇದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮಧ್ಯಾಹ್ನ ಊಟದ ಜತೆ ಒಂದು ಅಥವಾ ಎರಡು ಮೊಟ್ಟೆ ತಿಂದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವಂತೆ.
ನಾವು ನಿತ್ಯ ಸೇವಿಸುವ ಸಾಮಾನ್ಯ ಊಟದಲ್ಲಿ ಸುಮಾರು 500 ಕ್ಯಾಲರಿ ಹೊಂದಿರುತ್ತದೆಂದು ಅಂದಾಜಿಸಲಾಗಿದೆ. ದೇಹಕ್ಕೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶಗಳು, ಮೊಟ್ಟೆಯಲ್ಲಿರುವುದರಿಂದ ಅದು ಉತ್ತಮ ಆಹಾರವೆಂದೇ ಪರಿಗಣಿಸಲಾಗುತ್ತಿದೆ.
ಮೊಟ್ಟೆ ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗಲಿದೆ. ದೇಹದ ಬೊಜ್ಜು ಕರಗಿಸಲು ಸಹಕಾರಿಯಾಗಿದೆ. ಮಾತ್ರವಲ್ಲದೆ, ನಮ್ಮ ದೇಹವನ್ನು ಸದೃಢವಾಗಿ (ಫಿಟ್ನೆಸ್)ಟ್ಟುಕೊಳ್ಳಲು ನೆರವಾಗುತ್ತದೆ. ಕಣ್ಣುಗಳನ್ನು ಕಾಡುವ ರೋಗ ರುಜಿನಗಳನ್ನು ದೂರಮಾಡುತ್ತದೆ.
ಹತ್ತು ಹಲವು ಪ್ರಯೋಜನಗಳಾಗುವ ಮೊಟ್ಟೆಯನ್ನು ನಿತ್ಯ ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. ಇದರಲ್ಲಿರುವ ಸೆಲೆನಿಯಂ ಮತ್ತು ಅಯೋಡಿನ್ ಅಂಶಗಳು ಹೆಚ್ಚು ಲವಲವಿಕೆಯಿಂದ ಇರಲು ಸಹಕರಿಸುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತವೆ.
Comments are closed.