ಕುಂದಾಪುರ: ಕಳೆದ ಕೆಲವು ದಿನಗಳಿಂದ ಸಾರ್ವಜನಿಕರ ಆಕ್ರೋಶಕ್ಕೆ ಹಾಗೂ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗಿದ್ದ ನಗರದ ಹೊರವಲಯದ ಚಿಕ್ಕನ್‌ಸಾಲ್ ರಸ್ತೆಯ ತುದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹಾಕಲಾಗಿದ್ದ ತಾತ್ಕಾಲಿಕ ರಸ್ತೆ ತಡೆಯನ್ನು ಬುಧವಾರ ತೆರವುಗೊಳಿಸಲಾಗಿದೆ.
ಚಿಕ್ಕನ್‌ಸಾಲ್ ರಸ್ತೆ ಹಾಗೂ ಆನಗಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂಪರ್ಕಿಸುವ ಸಂಗಮ್ ಜಂಕ್ಷನ್‌ನಲ್ಲಿ ಜನಸಂದಣೆ ದಟ್ಟವಾಗಿರುತ್ತದೆ, ಇದರಿಂದಾಗಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ ಎನ್ನುವ ಸಾಮಾಜಿಕ ಕಳಕಳಿಗೆ ಪರಿಹಾರವನ್ನು ಕಂಡುಕೊಳ್ಳುವ ವೇಳೆಯಲ್ಲಿ ಚಿಕ್ಕನ್‌ಸಾಲ್ ರಸ್ತೆಯ ಪ್ರವೇಶವನ್ನೆ ಮುಚ್ಚುವ ನಿರ್ಧಾರ ಕೈಗೊಂಡಿದ್ದ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆ ಕಂಪೆನಿಯವರು ಭಾರಿ ಗಾತ್ರದ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಡ್ಡವಾಗಿ ಇರಿಸುವ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದರು.
ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದ ವಿರುದ್ದ ಸಿಡಿದೆದ್ದ ಸ್ಥಳೀಯರು ಹಾಗೂ ಸಾರ್ವಜನಿಕರು ಮಾಧ್ಯಮದ ಮೂಲಕ ತಮ್ಮ ಆಕ್ರೋಶಗಳನ್ನು ಹೊರ ಹಾಕಿದ್ದರು. ಸ್ಥಳೀಯ ಸಂಗಮ್ ಫ್ರೆಂಡ್ಸ್ ಹಾಗೂ ಆಟೋ ಚಾಲಕರ ಪ್ರತಿನಿಧಿಗಳು ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ರಸ್ತೆ ತಡೆಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಡಿವೈಎಸ್‌ಪಿ ಯವರು ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಜೆಯವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಗುತ್ತಿಗೆ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದ್ದರು.
ರಸ್ತೆ ತಡೆ ತೆರವಿಗೆ ಯಾವುದೆ ಕ್ರಮಗಳು ಕೈಗೊಳ್ಳದೆ ಇರುವುದರಿಂದ ಕೆಂಡಾಮಂಡಲವಾಗಿದ್ದ ಸ್ಥಳೀಯ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಒಂದೆರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಪ್ರತಿಭಟನೆಯ ಅಸ್ತ್ರ ಹಿಡಿಯುವ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಂಗಳವಾರ ಮಿನಿ ವಿಧಾನಸೌಧದಲ್ಲಿ ಉಪವಿಭಾಗಧಿಕಾರಿ ಮಧುಕೇಶ್ವರ ಹಾಗೂ ಡಿವೈಎಸ್‌ಪಿ ದಿನೇಶ್‌ಕುಮಾರ ಅವರ ಉಪಸ್ಥಿತಿಯಲ್ಲಿ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕಂಪೆನಿ ಅಧಿಕಾರಿಗಳ ಸಭೆ ನಡೆಸಿ ಬುಧವಾರ ತಡೆ ತೆರವುಗೊಳಿಸುವ ನಿರ್ಧಾರಕ್ಕೆ ಬರಲಾಗಿತ್ತು.
ಹೂ ಗುಚ್ಚ ನೀಡಿದ ಸ್ಥಳೀಯರು
ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ಪಂದಿಸಿದ ಕುಂದಾಪುರದ ಉಪವಿಭಾಗದ ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ್ ಹಾಗೂ ಉಪವಿಭಾಗಾಧಿಕಾರಿ ಮಧುಕೇಶ್ವರ ಅವರಿಗೆ ಪುಷ್ಪಗುಚ್ಚವನ್ನು ನೀಡಿ ಕೃತಜ್ಞತೆಯನ್ನು ಸಲ್ಲಿಸಲು ಸ್ಥಳೀಯರು ಸಿದ್ದತೆ ಮಾಡಿಕೊಂಡಿದ್ದರು.
ಬುಧವಾರ ಬೆಳಿಗ್ಗೆ ತಡೆ ತೆರವು ಕಾರ್ಯಾಚರಣೆಗೆ ಬಂದಿದ್ದ ಗುತ್ತಿಗೆ ಕಂಪೆನಿ, ಹೆದ್ದಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸ್ವಾಗತಿಸಿದ ಸ್ಥಳೀಯರು. ಕಾರ್ಯಚರಣೆಯ ಆರಂಭದ ವೇಳೆ ಕರ್ತವ್ಯಕ್ಕಾಗಿ ಆಗಮಿಸಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೂ ಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಕಾರ್ಯಾಚರಣೆ ನಡೆಯುವ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ ಅವರಿಗೂ ಕೃತಜ್ಞತೆ ಸಲ್ಲಿಸಿದರು.
ದಿವಾಕರ ಪೂಜಾರಿ ಕಡ್ಗಿ ಮನೆ, ಸಂಗಮ್ ಫ್ರೆಂಡ್ಸ್‌ನ ಸುರೇಂದ್ರ ಕಾಂಚನ್, ರಾಜೇಂದ್ರ ಕಾಂಚನ್, ಪುರಸಭಾ ಸದಸ್ಯರಾದ ಶ್ರೀಧರ ಶೇರುಗಾರ, ಸಂತೋಷ್ ಶೆಟ್ಟಿ ಮುಂತಾದವರಿದ್ದರು.
ಸ್ಥಳೀಯ ಆಗ್ರಹ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಡಿವೈಎಸ್‌ಪಿ ಹಾಗೂ ಉಪವಿಭಾಗಾಧಿಕಾರಿಗಳು ರಸ್ತೆ ತಡೆ ತೆರವು ಮಾಡಿರುವುದು ನಮಗೆ ಸಂತೋಷ ತಂದಿದೆ. ಮುಂದೆ ಅಪಘಾತಗಳು ಆಗದಂತೆ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು.
ನಾಗೇಶ್ ಎಂ ಪುತ್ರನ್. ಅಧ್ಯಕ್ಷರು ಶ್ರೀ ಚಕ್ಕಮ್ಮ ದೇವಸ್ಥಾನ ಕಳಿನಕಟ್ಟೆ.
ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿ ದೊಡ್ಡ ಸಂಖ್ಯೆಯ ಸಾರ್ವಜನಿಕರು ಸಂಗಮ್ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಾರೆ. ಈ ವೇಳೆ ಯಾವುದೆ ಅವಘಡಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಕೈಗೊಳ್ಳುವ ಸುರಕ್ಷತಾ ಕ್ರಮಗಳಿಗೆ ಸ್ಥಳೀಯರು ಸಹಕಾರ ನೀಡುವ ಬದ್ದತೆಯನ್ನು ಹೊಂದಿದ್ದಾರೆ.
ಸುರೇಂದ್ರ ಕಾಂಚನ್, ಸ್ಥಳೀಯ ನಿವಾಸಿ
ಇದನ್ನೂ ಓದಿರಿ- ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗುತ್ತಿದೆ ಸಂಗಮ್ ಜಂಕ್ಷನ್-ಕುಂದಾಪುರ ಪೇಟೆ ಸಂಪರ್ಕ!
Comments are closed.