ಕರಾವಳಿ

ಹಣಕ್ಕಾಗಿ ಅಕ್ಕನನ್ನೇ ಕೊಂದ ತಮ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕುಂದಾಪುರ ನ್ಯಾಯಾಲಯ

Pinterest LinkedIn Tumblr

ಕುಂದಾಪುರ: ಹಣಕ್ಕಾಗಿ ಸ್ವಂತ ಅಕ್ಕನನ್ನೇ ಕೊಲೆ ಮಾಡಿದ ಅಪರಾಧಿ ಕುಂದಾಪುರದ ಅಣ್ಣಪ್ಪ ಭಂಡಾರಿ (45)ಗೆ ಜೀವಾವಧಿ ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಕಳೆದ ವರ್ಷದ ಜು. 22ರಂದು ರಾತ್ರಿ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಅವರಿಗೆ ಸೋದರ ಅಣ್ಣಪ್ಪ ಭಂಡಾರಿ (45) ಗಂಭೀರ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿ ವಾರಗಳ ಬಳಿಕ (ಜು.28) ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಸಂಗಮ್ ಬಳಿ ಕ್ಷೌರದಂಗಡಿ ಹೊಂದಿದ್ದ ಅಣ್ಣಪ್ಪ ಭಂಡಾರಿ, ಮನೆಯಲ್ಲಿದ್ದ ವಿಜಯಾ ಅವರಲ್ಲಿಗೆ ಕುಡಿದು ಬಂದು ದುಡ್ಡಿನ ವಿಚಾರದಲ್ಲಿ ತಗಾದೆ ತೆಗೆದಿದ್ದು, ಸ್ವಲ್ಪ ಹೊತ್ತು ರಂಪಾಟ ಮಾಡಿದ ಅಣ್ಣಪ್ಪ ಸಿಟ್ಟಿನಲ್ಲಿ ವಿಜಯಾ ಅವರಿಗೆ ಕತ್ತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ವಿಜಯಾ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸುತ್ತಾರೆ. ಪೊಲೀಸರು ವಿಜಯಾ ಅವರ ಹೇಳಿಕೆ ಪಡೆದು ಅಣ್ಣಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸುತ್ತಾರೆ. ಆದರೆ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಾ ಚಿಕಿತ್ಸೆ ಫಲಕಾರಿಯಾಗದೇ ಜು.28ರಂದು ಸಾವನ್ನಪ್ಪಿದ್ದರು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಸಿಪಿ‌ಐ ಮಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಸೆಕ್ಷನ್ 448 (ಮನೆಗೆ ಅಕ್ರಮ ಪ್ರವೇಶ) ಅಡಿಯಲ್ಲಿ ಹಾಗೂ ಕೊಲೆ ಕೇಸು (ಐಪಿಸಿ ಸೆಕ್ಷನ್ 302) ಅಡಿಯಲ್ಲಿ ಆರೋಪಿ ದೋಷಿಯೆಂದು ತೀರ್ಪು ನೀಡಿದ್ದಾರೆ.

ವರ್ಷದೊಳಗೆ ಐತಿಹಾಸಿಕ ತೀರ್ಪು
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪರಾಧಿ ಅಣ್ಣಪ್ಪ ಭಂಡಾರಿಗೆ ಜೀವಾವಧಿ ಶಿಕ್ಷೆ, 40 ಸಾವಿರ ರೂ. ದಂಡ ತಪ್ಪಿದಲ್ಲಿ 4 ತಿಂಗಳು ಜೈಲು ಶಿಕ್ಷೆ, ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ. ಈ ಪ್ರಕರಣ ನಡೆದು 11 ತಿಂಗಳಾಗಿದ್ದು, ಒಂದು ವರ್ಷದೊಳಗೆ ವಿಚಾರಣೆ ನಡೆದು, ಆರೋಪಿ ತಪ್ಪಿತಸ್ಥನೆಂದು ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು ಇದೊಂದು ಇತಿಹಾಸ ನಿರ್ಮಿಸಿದಂತಾಗಿದೆ.

Comments are closed.