ಕರಾವಳಿ

ಕಾಂಗ್ರೆಸ್ ಕಾರ್ಯಕರ್ತರಿಂದ ಡೆಂಗ್ಯೂ ನಿಯಂತ್ರಣ ಜಾಗೃತಿ ಅಭಿಯಾನ ; ಮಾಜಿ ಶಾಸಕ ಲೋಬೋ

Pinterest LinkedIn Tumblr

ಮಂಗಳೂರು : ಅಗಸ್ಟ್ 10ರಿಂದ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಡೆಂಗ್ಯೂ ಕಾಯಿಲೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಮೂಡಿಸಲು ಜನಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.

ಅವರು ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ನಡೆದ ಮಂಗಳೂರು ನಗರ ಬ್ಲಾಕ್ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಕಾಯಿಲೆಯಿಂದ ಸಾವಿನ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗಿದೆ. ಸಾವಿರಾರು ಜನರು ಜ್ವರದಿಂದ ಬಳಲಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ಜನರಿಗೆ ಅರಿವು ಮೂಡಿಸಲು ಮತ್ತು ರೋಗವನ್ನು ನಿಯಂತ್ರಿಸಲು ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭಿಸಲು ಉದ್ದೇಶಿಸಿದೆ ಎಂದು ಲೋಬೋ ಮಾಹಿತಿ ನೀಡಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಇಲಾಖೆಯ ನಿವೃತ್ತ ಮೇಲ್ವಿಚಾರಕ ಜಯರಾಮ್ ಅವರು, ಡೆಂಗ್ಯೂವಿನಲ್ಲಿ ಸಾಮಾನ್ಯ ಜ್ವರ, ರಕ್ತಸ್ರಾವ ಜ್ವರ ಹಾಗೂ ಪ್ರಜ್ಞೆ ತಪ್ಪುವ ಜ್ವರಗಳನ್ನು ನಾವು ಕಾಣುತ್ತೇವೆ ಇದರಲ್ಲಿ ರಕ್ತಸ್ರಾವ ಜ್ವರ ಮತ್ತು ಪ್ರಜ್ಞೆ ತಪ್ಪುವ ಜ್ವರಗಳು ಅಪಾಯಕಾರಿ. ಇದಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಸಾವು ಸಂಭವ ಖಂಡಿತ ಎಂದರು.

ಡೆಂಗ್ಯೂ ಕಾಯಿಲೆಯನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನು ಅವರವರ ಮನೆಯಲ್ಲಿ ಹಾಗೂ ಸುತ್ತಮತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತೆರೆದ ನೀರಿನ ಟ್ಯಾಂಕ್‌ಗಳು, ನೀರಿನ ಡ್ರಮ್‌ಗಳು, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಂತ ತಿಳಿ ನೀರಿನ ಅಂಶಗಳಲ್ಲಿ ಡೆಂಗ್ಯೂ ರೋಗಗಳ ಲಾರ್ವಗಳು ಕಂಡು ಬರುತ್ತದೆ. ಯಾವುದೇ ತೆರೆದ ಜಾಗಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿದರೆ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅಬ್ದುಲ್ ಸಲೀಂ, ವಿಶ್ವಾಸ್ ಕುಮಾರ್ ದಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎ. ಸುರೇಶ್ ಶೆಟ್ಟಿ, ಪ್ರಭಾಕರ ಶ್ರೇಯಾನ್, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

Comments are closed.