ಕರಾವಳಿ

ಮೀನು ದಾಸ್ತಾನು ಘಟಕದಲ್ಲಿ ‘ಅನಿಲ ಸೋರಿಕೆ’: ಸಮಗ್ರ ತನಿಖೆಗೆ ಎಸ್ಪಿ, ಡಿಸಿ ಸೂಚನೆ- ಸಮಿತಿ ರಚನೆ (Video)

Pinterest LinkedIn Tumblr

ಉಡುಪಿ: ದೇವಲ್ಕುಂದ ಮೀನು ದಾಸ್ತಾನು ಘಟಕದಲ್ಲಿ ‘ಅನಿಲ ಸೋರಿಕೆ’: ಸಮಗ್ರ ತನಿಖೆಗೆ ಎಸ್ಪಿ, ಡಿಸಿ ಸೂಚನೆ- ಸಮಿತಿ ರಚನೆ (Video)ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ದೇವಲ್ಕುಂದ ಎಂಬಲ್ಲಿ ಮೀನು ದಾಸ್ತಾನು ಘಟಕದಲ್ಲಿ ನಡೆದ ಅಮೋನಿಯಂ ರಾಸಾಯನಿಕ ಸೋರಿಕೆಯಾಗಿ ಎಪ್ಪತ್ತನಾಲ್ಕು ಮಂದಿ ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪತ್ರಿಕಾ ಹೇಳಿಕೆ ನೀಡಿದ್ದು ಸಮಗ್ರ ತನಿಖೆಯ ಭರವಸೆ ನೀಡಿದ್ದಾರೆ. ಈ ಮೊದಲು ಅವರು ಆಸ್ಪತ್ರೆಗೆ ಭೇಟಿ ಮಾಡಿ ಅಸ್ವಸ್ಥರ ವಿಚಾರಣೆ ನಡೆಸಿದ್ದಲ್ಲದೇ ಫ್ಯಾಕ್ಟರಿಗೆ ತೆರಳಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಎಸ್ಪಿ ಪತ್ರಿಕಾ ಹೇಳಿಕೆ…
ಮೀನುಗಳನ್ನು ದಾಸ್ತಾನು ಮಾಡಿ ವಿದೇಶಕ್ಕೆ ರಫ್ತು ಮಾಡುವ Malpe Fresh Marine Export Pvt. Ltd ಎಂಬ ಹೆಸರಿನ ಫ್ಯಾಕ್ಟರಿಯು 2017 ನೇ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಗಿದ್ದು ಈ ಫ್ಯಾಕ್ಟರಿಯಲ್ಲಿ ಆಡಳಿತ ವರ್ಗದ 91 ಜನ ಸೇರಿ ಸುಮಾರು 401 ನೌಕರರಿದ್ದಾರೆ. ಆ.12ರಂದು ಬೆಳಿಗ್ಗೆ ಸುಮಾರು 06:15 ಗಂಟೆಗೆ ಸದರಿ ಫ್ಯಾಕ್ಟರಿಯಲ್ಲಿ ನೀರಿನ ಶೀತಲಿಕರಣಕ್ಕೆ ಉಪಯೋಗಿಸುವ ಅಮೋನಿಯ ಅನಿಲದ ಸೋರಿಕೆಯಾಗಿ ಸುಮಾರು 300 ಮೀಟರ್ ಸುತ್ತ ಪ್ರದೇಶಕ್ಕೆ ಹರಡಿದ್ದು, ಗಾಳಿಯಲ್ಲಿ ಸೇರಿದ ಸದರಿ ಅನಿಲವನ್ನು ಫ್ಯಾಕ್ಟರಿಯ ಅವರಣದೊಳಗಿನ ಕಟ್ಟಡಗಳಲ್ಲಿ ವಾಸಮಾಡಿಕೊಂಡಿದ್ದ ನೌಕರರು ಸೇವಿಸಿ ಸುಮಾರು 75 ನೌಕರರು ಅಸ್ವಸ್ಥರಾಗಿ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಯಾವುದೇ ಜೀವ ಹಾನಿ ಆಗಿರುವುದಿಲ್ಲ. ಅಸ್ವಸ್ಥರಾದವರ ಪೈಕಿ 7 ಜನ ಗಂಡಸರು ಮತ್ತು 68 ಜನ ಹೆಂಗಸರು ಇದ್ದಾರೆ. ಆ ಪೈಕಿ ಓರ್ವ ಮಹಿಳೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದವರಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ವಸ್ಥಗೊಂಡ ಕಾರ್ಮಿಕರ ಪೈಕಿ 5 ಜನ ನೇಪಾಲದವರೂ ಸೇರಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಭಾಗದವರಾಗಿದ್ದು ಫ್ಯಾಕ್ಟರಿಯ ಅವರಣದೊಳಗಿನ ಕಟ್ಟಡಗಳಲ್ಲಿ ವಾಸವಿದ್ದಾರೆ. ಪ್ರಸ್ತುತ ಮೀನಿನ ಸರಬರಾಜು ಇಲ್ಲದ ಹಿನ್ನೆಲೆಯಲ್ಲಿ ಈಗ 3 ದಿನದಿಂದ ಫ್ಯಾಕ್ಟರಿಯನ್ನು ಮುಚ್ಚಿದ್ದು ಈಗಾಗಲೇ ಫ್ಯಾಕ್ಟರಿಯಲ್ಲಿ ದಾಸ್ತಾನು ಇದ್ದ ಮೀನಿನ ಸಂರಕ್ಷಣೆಯ ಬಗ್ಗೆ ಫಾಕ್ಟರಿಯ ಶೀತಲೀಕರಣ ವ್ಯವಸ್ಥೆಯು ಕಾರ್ಯಾಚರಣೆಯಲ್ಲಿ ಇದ್ದಿರುವುದಾಗಿ ತಿಳಿದು ಬಂದಿದೆ. ಘಟನೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳಿಗ್ಗೆ ಸುಮಾರು 07:00 ಘಂಟೆಗೆ ಸಾರ್ವಜನಿಕರೋರ್ವರು ದೂರವಾಣಿ ಕರೆ ಮಾಡಿ ಪ್ರಥಮ ಮಾಹಿತಿ ಬಂದಿದ್ದು, ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಕುಂದಾಪುರ ಡಿವೈಎಸ್.ಪಿ. ಹಾಗೂ ಸಮೀಪದ ಪೊಲೀಸ್ ಅಧಿಕಾರಿಯವರಿಗೆ ಕೂಡಲೇ ಸ್ಥಳಕ್ಕೆ ತೆರಳಿ ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ ಮೇರೆಗೆ ಕೂಡಲೇ ಕುಂದಾಪು ಡಿವೈಎಸ್‌ಪಿ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ., ಸ್ಥಳೀಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕಾರ್ಯದಲ್ಲಿ ತೊಡಗಿರುತ್ತಾರೆ.

ಘಟನೆಯ ಬಗ್ಗೆ ಕುಂದಾಪುರ ಅಗ್ನಿಶಾಮಕ ದಳದ ಅಧಿಕಾರಿಯವರಿಗೆ ಬೆಳಿಗ್ಗೆ 06:40 ಘಂಟೆಗೆ ಮಾಹಿತಿ ತಿಳಿದಿದ್ದು, ಡಿ.ಎಫ್.ಒ.ರವರಾದ ವಸಂತ ಕುಮಾರ್ ನೇತೃತ್ವದ ಅಗ್ನಿಶಾಮಕ ದಳದವರು 07:00 ಘಂಟೆಗೆ ಸ್ಥಳಕ್ಕೆ ಆಗಮಿಸಿ, ವಿಶೇಷ ಮಾಸ್ಕ್ಗಳನ್ನು ಉಪಯೋಗಿಸಿ ಅಮೋನಿಯಂಅನಿಲದ ಸೋರಿಕೆಯಾಗದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಶ್ಲಾಘನೀಯ ಸೇವೆಯನ್ನು ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಆಗಮಿಸಿದ್ದಾರೆ.

ಈ ಘಟನೆಯ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಶಾಂತ ಪರಿಸ್ಥಿತಿ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ನಿಭಾಯಿಸಲು ಪೊಲೀಸ್ ಸಿಬ್ಬಂದಿಯವರನ್ನು ನೇಮಿಸಲಾಗಿದೆ. ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಯವರೊಂದಿಗೆ ಸಮನ್ವಯ ಸಾಧಿಸಿ ಮುಂದಿ ಕ್ರಮ ಜರುಗಿಸಲಾಗುವುದು.

ಜಿಲ್ಲಾಧಿಕಾರಿ ಪ್ರಕಟನೆ…
ದೇವಲ್ಕುಂದ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆಯ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಕುಂದಾಪುರ ಡಿವೈಎಸ್ಪಿ,ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

(ವರದಿ-ಯೋಗೀಶ್ ಕುಂಭಾಸಿ)

ಸಂಬಂಧಿತ ವರದಿಗಳು-

ಕಟ್‌ಬೆಲ್ತೂರಿನ ಮೀನು ಸಂಸ್ಕರಣಾ ಘಟಕದಲ್ಲಿ `ಅಮೋನಿಯಾ’ ಸೋರಿಕೆಯಾಗಿ 74 ಕಾರ್ಮಿಕರು ಅಸ್ವಸ್ಥ; ಡಿಸಿ, ಎಸ್‌ಪಿ ಭೇಟಿ

ಮೀನುಸಂಸ್ಕರಣ ಕಟ್ಟಡಕ್ಕೆ ಪರವಾನಿಗೆ ನೀಡಿದ ಕಟ್‌ಬೆಲ್ತೂರ್ ಗ್ರಾ.ಪಂ.|ಜಯಕರ್ನಾಟಕ ಸಂಘಟನೆಯಿಂದ ಮಾ.15ಕ್ಕೆ ಪ್ರತಿಭಟನೆ

ಕುಂದಾಪುರ: ಮೀನು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಆಕ್ರೋಷ; ಕಟ್‌ಬೆಲ್ತೂರ್ ಪಂಚಾಯತ್ ಎದುರು ಪ್ರತಿಭಟನೆ

Comments are closed.