ಮಂಗಳೂರು : ಪರಿಶ್ರಮದಿಂದ ಆರ್ಥಿಕ ಪುನ:ಶ್ಚೇತನ ಸಾಧ್ಯ. ಉದ್ಯಮಶೀಲ ಗುಣಗಳನ್ನು ಮೈಗೂಡಿಸಿಕೊಂಡು ಕೌಶಲ್ಯ ತರಬೇತಿ ಪಡೆದು ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸಹಾಯಧನಗಳ ಸೌಲಭ್ಯಗಳನ್ನು ಪಡೆದು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಕರೆ ನೀಡಿದರು.
ಅವರು ಕರ್ನಾಟಕ ಸರಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಇವರ ಸಹಯೋಗದೊಂದಿಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ನೂತನ ಜವಳಿ ನೀತಿ ಹಾಗೂ ಇಲಾಖಾ ಯೋಜನೆಗಳ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜರುಗಿದ 2 ದಿನಗಳ ಉದ್ಯಮಶೀಲತಾಭಿವೃದ್ಧಿ ಶಿಬಿರದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಮಾತನಾಡಿ ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಇಲಾಖೆಯ ಸಹಾಯ ನಿರ್ದೇಶಕ ಹೆಚ್. ಶಿವಶಂಕರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿಡಾಕ್ ಜಿಲ್ಲಾ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಇಲಾಖೆಯಲ್ಲಿ ದೊರೆಯುವ ತರಬೇತಿ ಹಾಗೂ ಮಾಹಿತಿಗಳ ಬಗ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಮಂಗಳೂರು ಶಾಖಾ ವ್ಯವಸ್ಥಾಪಕ ಎ. ಆರ್. ನಾಗೇಶ್ ಸಂಸ್ಥೆಯ ಕಾರ್ಯ ಯೋಜನೆ ಹಾಗೂ ಹಣಕಾಸು ಪಡೆಯುವ ಬಗ್ಗೆ ತಿಳಿಸಿದರು. ಸಿಂಡಿಕೇಟ್ ಬ್ಯಾಂಕ್ ಜ್ಞಾನಜ್ಯೋತಿ ಆರ್ಥಿಕ ಸಮಾಲೋಚನಾ ಟ್ರಸ್ಟ್‍ನ ಸುಜಾತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತರಬೇತಿ ನಡೆಸಿಕೊಟ್ಟರು.
ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ವಂದನಾರ್ಪಣೆಗೈದರು. ಸಿಡಾಕ್‍ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಕಾರ್ಯಕ್ರಮ ನಿರೂಪಿಸಿದರು. ಸಿಡಾಕ್ ತರಬೇತುದಾರಿಣಿ ಪ್ರವಿಷ್ಯ ಉಪಸ್ಥಿತರಿದ್ದರು.
Comments are closed.