ಕರಾವಳಿ

ಗಾಂಧೀಜಿಯವರ ಅಹಿಂಸಾ ತತ್ವವು ಪ್ರಪಂಚಕ್ಕೆ ಮಾದರಿಯಾಗಿದೆ: ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಉಡುಪಿ ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಉಡುಪಿಯ ಭುಜಂಗ ಪಾರ್ಕ್ ಬಳಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ಮಾತ್ರ ತಂದುಕೊಡುವ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ತೊಲಗಿಸಲು ಶ್ರಮಿಸಿದರು. ಅಹಿಂಸೆಯಿಂದಲೂ ಸ್ವಾತಂತ್ರ್ಯಗಳಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಮೇಲೆ ಇದೇ ಮಾರ್ಗದಲ್ಲಿ ಕೆಲವು ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿವೆ. ಗಾಂಧೀಜಿ ಸ್ವದೇಶಿ ವಸ್ತು ಬಳಕೆ, ಸಣ್ಣ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಜತೆಗೆ ಸರಳತೆ, ಸತ್ಯಕ್ಕೆ ಹೆಚ್ಚು ಆದ್ಯತೆ ನೀಡಿದವರು. ದೇಶಕ್ಕಾಗಿ ಜೈಲು ವಾಸ ಅನುಭವಿಸಿದರು. ಅಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿ ಇದನ್ನು ಪ್ರಪಂಚಕ್ಕೆ ಮಾದರಿಯಾಗಿ ತೋರಿಸಿದ ನಾಯಕ ಮಹಾತ್ಮ ಗಾಂಧೀಜಿ ಎಂದು ಶ್ಲಾಘಿಸಿದರು.

ಸಂಕಲ್ಪ ಯಾತ್ರೆಯು ಭುಜಂಗ ಪಾರ್ಕಿನ ಬಳಿ ಆರಂಭವಾಗಿ ಜೋಡುಕಟ್ಟೆ, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ಸ್ಟ್ಯಾಂಡ್ ಗಾಂಧಿ ಪ್ರತಿಮೆಯ ಬಳಿ ಸಾಗಿ ಸಿಟಿ ಬಸ್ ಸ್ಟ್ಯಾಂಡ್, ಕಲ್ಸಂಕ ಮೂಲಕ ಶ್ರೀ ಕೃಷ್ಣ ಮಠದ ವಾಹನ ತಂಗುದಾಣದ ಬಳಿ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜುಗಳು ಸುಮಾರು 2500 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.