ಕರಾವಳಿ

ಕುಂದಾಪುರ ಡಾ. ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ (Video)

Pinterest LinkedIn Tumblr

ಕುಂದಾಪುರ: ತಾಲೂಕಿನಲ್ಲಿ ಕನ್ನಡಾಭಿಮಾನದ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಡಾ. ರಾಜ್ ಸಂಘಟನೆಯವರು ಕನ್ನಡ ರಾಜ್ಯೋತ್ಸವವನ್ನು ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಚರಿಸಿದರು.

ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ಮಾತನಾಡಿ, ಭಾರತವು ಅತೀ ದೊಡ್ಡ ನಾಗರೀಕತೆ ಹೊಂದಿದ್ದು ಅದರಲ್ಲಿ ಎರಡೂವರೆ ಸಾವಿರ ವರ್ಷ ಇತಿಹಾಸವುಳ್ಳ ಕರ್ನಾಟಕವನ್ನು ಹಲವಾರು ರಾಜವಂಶಗಳು ಆಳ್ವಿಕೆ ನಡೆಸಿದ್ದಾರೆ. ಆ ಅವಧಿಯಲ್ಲಿ ಕಲೆ-ಸಾಹಿತ್ಯ ಮೊದಲಾದ ಕೊಡುಗೆಗಳನ್ನು ನಾಡಿಗೆ ನೀಡಿರುವುದನ್ನು ಸ್ಮರಿಸಬಹುದು. ಪಾಶ್ಚಾತ್ಯ ಸಂಸ್ಕ್ರತಿ, ಇತರೇ ಭಾಷೆಗಳಿಗೆ ಮಾರುಹೋಗುತ್ತಿರುವ ಯುವಕರಲ್ಲಿ ಕನ್ನಡ ಪ್ರೇಮ ಬೆಳೆಸಲು ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ. ಕನ್ನಡ ನಾಡು, ಕರ್ನಾಟಕ ಹೆಸರು ಬರಲು ಅವಿರತವಾಗಿ ಶ್ರಮಿಸಿ ತ್ಯಾಗ ಮಾಡಿದ ಮಹಾನುಭಾವರನ್ನು ಸ್ಮರಿಸಿಕೊಂಡು ಆದರ್ಶ ಮಾರ್ಗದಲ್ಲಿ ಸಾಗಬೇಕಿದೆ. ಕನ್ನಡದ ಬಗೆಗಿನ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ವರ್ಷವಿಡೀ ಕನ್ನಡ ಭಾಷಾಭಿಮಾನ ನೆಲ ಜಲದ ಬಗೆಗಿನ ಪ್ರೀತಿ ಉಳಿಸಿ, ಬಳಸಿ ಬೆಳಸಬೇಕು. ಮೂರು ವರ್ಷಗಳಿಂದ ಕುಂದಾಪುರದ ಡಾ. ರಾಜ್ ಸಂಘಟನೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.

ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಅಖಂಡ ಕರ್ನಾಟಕ ಕಲ್ಪನೆಯ ಹೋರಾಟಗಾರನ್ನು ನೆನಪಿಸಿಕೊಂಡು ಅವರ ಸನ್ನಡೆತೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಭಾಷೆ ಉಳಿವು ಮತ್ತು ಏಳಿಗೆಗಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ಮಾನವೀಯ ಮೌಲ್ಯ ಹಾಗೂ ಅಭಿವ್ರದ್ಧಿ ಚಿಂತನೆಗಳ ಮೂಲಕ ರಾಜ್ ಸಂಘಟನೆಯು ಕನ್ನಡ ಪ್ರೇಮವನ್ನು ಸಾರುತ್ತಿದೆ ಎಂದರು.

ಈ ಸಂದರ್ಭ ಡಾ. ರಾಜ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿಗಳಾದ ಅಜೇಂದ್ರ ಶೆಟ್ಟಿ, ಮುಸ್ತಾಫ, ಸಂಘಟನೆಯ ಪ್ರಮುಖರಾದ ಸುನೀಲ್ ಖಾರ್ವಿ, ಸಚಿನ್,ಪ್ರಭಾಕರ ಖಾರ್ವಿ, ಅಗಸ್ಟೀನ್ ಡಿಸೋಜ, ರಾಯ್ಸನ್ ಡಿಸೋಜಾ, ಗಣೇಶ್, ನವೀನ್, ಮೊದಲಾದವರಿದ್ದರು.

ಡಾ. ರಾಜ್ ಸಂಘಟನೆಯ ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿ, ಗೋಪಾಲ ಮಡಿವಾಳ ಪ್ರಾಸ್ತಾವನೆಗೈದರು. ಪ್ರಣಮ್ಯ ಪೂಜಾರಿ ಪ್ರಾರ್ಥಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ಮಝರ್ ಕುಂದಾಪುರ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.