ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ: ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಉಡುಪಿ: ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯದ ಗೃಹ ಮತ್ತು ಸಹಕಾರ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ದ್ವಜಾರೋಹಣ ನೆರವೇರಿಸಿದರು. ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನ ವೀಕ್ಷಿಸಿ, ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಮಂದಿಗೆ ಹಾಗೂ 2 ಸಂಘ ಸಂಸ್ಥೆಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಶಾಸಕ ರಘುಪತಿಭಟ್, ನಡೆದ ವಿವಿಧ ಸ್ಥಬ್ಧಚಿತ್ರಗಳ ಮತ್ತು ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಭುವನೇಶ್ವರಿ ದೇವಿಯ ಸ್ಥಬ್ದಚಿತ್ರ, ಉಡುಪಿ ನಗರಸಭೆಯ ಸ್ವಚ್ಛ ಭಾರತ ಅಭಿಯಾನ, ತೋಟಗಾರಿಕೆ ಇಲಾಖೆಯ ಅಣಬೆ ಬೇಸಾಯ, ಕೃಷಿ ಇಲಾಖೆಯ ಕೃಷಿ ಕುರಿತು ಅರಿವು ಮೂಡಿಸುವ ಸ್ಥಬ್ದಚಿತ್ರ, ನಿರ್ಮಿತಿ ಕೇಂದ್ರದ ಉಡುಪಿ ಜಿಲ್ಲೆಯ ಸಂಸ್ಕ್ರತಿ ಸಾರುವ ಸ್ಥಬ್ದಚಿತ್ರ, ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ಸ್ಥಬ್ದಚಿತ್ರ, ಆರೋಗ್ಯ ಇಲಾಖೆಯಿಂದ ಆರೋಗ್ಯ ಇಲಾಖೆಯ ಸೌಲಭ್ಯಗಳ ಹಾಗೂ ಕಾರ್ಯಕ್ರಮಗಳ ಅರಿವು ಮೂಡಿಸುವ ಸ್ಥಬ್ದಚಿತ್ರ, ಕಾರ್ಮಿಕ ಇಲಾಖೆಯಿಂದ ಇಲಾಖೆಯ ಕಾರ್ಯಕ್ರಮಗಳ ಅರಿವು ಮೂಡಿಸುವ ಸ್ಥಬ್ದಚಿತ್ರ, ಮೆಸ್ಕಾಂ ಇಲಾಖೆಯಿಂದ ಇಲಾಖೆಯ ಕಾರ್ಯಕ್ರಮಗಳ ಅರಿವು ಮೂಡಿಸುವ ಸ್ಥಬ್ದಚಿತ್ರ, ಕೆ.ಆರ್.ಐ.ಡಿ.ಎಲ್ ನಿಂದ ಉಡುಪಿ ಜಿಲ್ಲೆಯ ಸಂಸ್ಕ್ರತಿ ಸಾರುವ ಸ್ಥಬ್ದಚಿತ್ರ , ಸಾರಿಗೆ ಇಲಾಖೆಯಿಂದ ಇಲಾಖೆಯ ಕಾರ್ಯಕ್ರಮಗಳ ಅರಿವು ಮೂಡಿಸುವ ಸ್ಥಬ್ದಚಿತ್ರ ಮೆರವಣಿಗೆ ನಡೆಯಿತು.

ಕಲಾತಂಡದ ಮೆರವಣಿಗೆಯಲ್ಲಿ ಜಗ್ಗಲಿಗೆ, ಡೊಳ್ಳು ಕುಣಿತ, ಚಂಡೆ ವಾದನ, ವೀರಗಾಸೆ , ಗೊಂಬೆ ಕುಣಿತ ತಂಡಗಳು ಭಾಗವಹಿಸಿದ್ದವು.  ಸ್ಥಬ್ದಚಿತ್ರ ಮೆರವಣಿಗೆಯಲ್ಲಿ , ಕೃಷಿ ಇಲಾಖೆಗೆ ಪ್ರಥಮ, ಉಡುಪಿ ನಗರಸಭೆಗೆ ದ್ವಿತೀಯ ಮತ್ತು ನಿರ್ಮಿತಿ ಕೇಂದ್ರಕ್ಕೆ ತೃತೀಯ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್ ಕಲ್ಲೋಳಿಕರ್ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.

Comments are closed.