ಕರಾವಳಿ

ಸಚಿವ ಕೆ.ಎಸ್. ಈಶ್ವರಪ್ಪರಿಗೆ ಸ್ವಾಭಿಮಾನ ಇಲ್ಲ: ದಿನೇಶ್ ಗುಂಡೂರಾವ್

Pinterest LinkedIn Tumblr

ಉಡುಪಿ: ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಈಗ ಮಂತ್ರಿಯಾಗಿದ್ದಾರೆ. ಅವರಿಗಿಂತ ರಾಜಕೀಯದಲ್ಲಿ ಕಿರಿಯರು ಇದೀಗಲೇ ಡಿಸಿಎಂ ಆಗಿದ್ದು ಸಚಿವ ಈಶ್ವರಪ್ಪರಿಗೆ ಸ್ವಾಭಿಮಾನ ಇಲ್ಲ ಒಂದು ವೇಳೆ ಸ್ವಾಭಿಮಾನಿ ಆಗಿದ್ದರೆ ಮಂತ್ರಿ ಆಗಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಅವರು ಉಡುಪಿ ನಗರದ ಅಜ್ಜರಕಾಡಿನ ಪುರಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಿನೇಶ್ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿದರು. ಈಶ್ವರಪ್ಪನಿಗೆ ಯಾವುದೇ ಬದ್ಧತೆ ಇಲ್ಲ. ಅಹಿಂದ ಪರ ಒಂದೇ ಒಂದು ಹೋರಾಟ ಮಾಡಿದ ಇತಿಹಾಸವಿಲ್ಲ. ಈಶ್ವರಪ್ಪನಿಗೆ ಗಂಭೀರತೆಯಿಲ್ಲ ಅವರು ಗಹನವಾಗಿ ಮಾತನಾಡಲ್ಲ ಎಂದರು.

ಬಿಜೆಪಿ, ಜೆಡಿಎಸ್ ಉಪಚುನಾವಣೆ ಒಳ ಒಪ್ಪಂದ ವಿಚಾರದಲ್ಲಿ ದೇವೇಗೌಡ ಮತ್ತು ಯಡಿಯೂರಪ್ಪ ಇವರಲ್ಲಿ ಯಾರು ಸತ್ಯ ಮಾತನಾಡುತ್ತಾರೆ ಯಾರು ಸುಳ್ಳು ಹೇಳುತ್ತಾರೆ ಗೊತ್ತಾಗುವುದಿಲ್ಲ. ಈ ಗೊಂದಲ ಸೃಷ್ಟಿ ಮಾಡಿದ್ದು ಜೆಡಿಎಸ್ ಪಕ್ಷದವರು. ಕುಮಾರಸ್ವಾಮಿ ಹೇಳಿಕೆ ಗಳು ಅವಮಾನಕ್ಕೆ ಕಾರಣವಾಗಿವೆ. ಮುಂದೆ ಏನು ಮಾಡುತ್ತಾರೊ ಅದು ಅವರಿಗೆ ಬಿಟ್ಟದ್ದು. ನಾವು ಮಾತ್ರ ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದರು. ಸುಪ್ರೀಂ ಕೋರ್ಟ್ ತಲುಪಿರುವ ಯಡಿಯೂರಪ್ಪಆಡಿಯೋ ಪ್ರಕರಣ ಕೋರ್ಟ್ನ ಗಮನಕ್ಕೆ ಬಂದಿದೆ ಎಂಬುದು ಮುಖ್ಯ. ಇದರಲ್ಲಿ ಸಮ್ಮಿಶ್ರ ಸರಕಾರದ ಪತನದಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ಪಾತ್ರ ಜಗಜ್ಜಾಹಿರಾಗಿದೆ. ಶಾಸಕರಿಗೆ ಅಮಿಷ, ಆಶ್ವಾಸನೆಗಳನ್ನು ಒಡ್ಡಿರುವುದು ಇದರಲ್ಲಿ ಸಾಬೀತಾಗಿದೆ. ಸಂವಿಧಾನ ಬಾಹಿರ ಕೆಲಸದಲ್ಲಿ ಅಮಿತ್ ಶಾ ಶಾಮೀಲಾ ಗಿದ್ದಾರೆ. ಇವರ ನೇತೃತ್ವದಲ್ಲಿ ಎಲ್ಲಾ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಈ ಪ್ರಕರಣದ ಬಗ್ಗೆ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಬೆಂಗಳೂರಿಗೆ ತೆರಳಿದ ಬಳಿಕ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಹೋರಾಟದ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದರು.

ಜೆಡಿಎಸ್ ಪಕ್ಷಕ್ಕೆ ಒಂದು ಸ್ಪಷ್ಟವಾದ ನಿಲುವು, ಸಿದ್ಧಾಂತವೇ ಇಲ್ಲ. ಜೆಡಿಎಸ್ ಒಮ್ಮೆ ಯಾರೊಂದಿಗೂ ಸ್ನೇಹ ಬೆಳೆಸುತ್ತಾರೆ, ಇನ್ನೊಮ್ಮೆ ಯಾರೊಂದಿಗೂ ದ್ವೇಷ ಸಾಧಿಸುತ್ತಾರೆ. ಸಹಾಯ ಮಾಡಿದವರ ಜೊತೆ ಹೋಗುವ ಪಾರ್ಟಿ ಅದು ಎಂದರು.

Comments are closed.