ಉಡುಪಿ: ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ದೇಶದಾದ್ಯಂತ , “ಚೈಲ್ಡ್ ಲೈನ್ ಸೇ ದೋಸ್ತಿ” ಸಪ್ತಾಹ ನಡೆಯುತಿದ್ದು, ಉಡುಪಿ ಜಿಲ್ಲೆಯಲ್ಲಿ ನವೆಂಬರ್ 14 ರಿಂದ 20 ರ ವರೆಗೆ , ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಚೈಲ್ಡ್ ಲೈನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು. ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾಮಾನ್ಯ ನಾಗರೀಕರನ್ನು ಮತ್ತು ಫಲಾನುಭವಿಗಳನ್ನು ಚೈಲ್ಡ್ ಲೈನ್ 1098 ನ ಜೊತೆ ಕೈ ಜೋಡಿಸುವಂತೆ ಮಾಡುವುದು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಗುರಿಯಾಗಿದೆ, ನವೆಂಬರ್ ತಿಂಗಳನ್ನು ಮಕ್ಕಳ ಹಕ್ಕುಗಳ ಮಾಸವೆಂದು ಪರಿಗಣಿಸಿ, ಮಾಸದಾದ್ಯಂತ ಒಂದಲ್ಲ ಒಂದು ಮಕ್ಕಳ ಕಾಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯು, ಒಳಕಾಡು ಸರಕಾರಿ ಸಂಯುಕ್ತ ಪ್ರೌಡ ಶಾಲೆಯಲ್ಲಿ ನವೆಂಬರ್ 14 ರಂದು ಆಯೋಜಿಸಲಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಉಡುಪಿಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ ಕಳೆದ 6 ತಿಂಗಳಲ್ಲಿ 164 ಪ್ರಕರಣಗಳ ದಾಖಲಾಗಿದ್ದು, 148 ಪ್ರಕರಣವು ಯಶಸ್ವಿಯಾಗಿ ಪರಿಹರಿಸಲಾಗಿದೆ. 14 ಪ್ರಕರಣಗಳು ಅನುಸರಣೆಯಲ್ಲಿದ್ದು, ಪೊಲೀಸ್, ಸರಕಾರದ ವಿವಿಧ ಇಲಾಖೆ ಮತ್ತು ಸಂಬಂಧಿತರ ಸಹಕಾರದಿಂದ ಮಕ್ಕಳಿಗೆ ನ್ಯಾಯ ಒದಗಿಸಲು ಶ್ರಮಿಸಲಾಗುತ್ತಿದೆ. ಚೈಲ್ದ್ ಲೈನ್ ಸೇ ದೋಸ್ತಿ ಅಭಿಯಾನದ ಮುಖ್ಯ ಉದ್ಧೇಶ ಜನರಲ್ಲಿ ಮಕ್ಕಳ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸುವುದಾಗಿದ್ದು, ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರೂ ಸ್ವಯಂ ಪ್ರೇರಣೆಯಿಂದ ಸ್ಪಂದಿಸುವಂತಾಗಬೇಕು. ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಕೂಡಲೇ ಸಹಾಯವಾಣಿ 1098 ನ್ನು ಸಂಪರ್ಕಿಸಿ, ಮಾಹಿತಿ ತಿಳಿಸುವಂತೆ ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ತಿಳಿಸಿದರು.
ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹ ಕುರಿತು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಎಎಸ್ಪಿ ಕುಮಾರ್ ಚಂದ್ರ ಉಪಸ್ಥಿತರಿದ್ದರು.
Comments are closed.