ಮಂಗಳೂರು : ಈ ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು 2019-20ನೇ ಶೈಕಣಿಕ ಸಾಲಿನಿಂದಲೇ ಅನ್ವಯವಾಗುವಂತೆ ಆರಂಭಿಸಿರುವ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಕಲಿಕೆಯ ಭಾಗ್ಯವು ದ.ಕ. ಜಿಲ್ಲೆಯ 5 ತಾಲೂಕಿನ 7 ವಲಯಗಳಲ್ಲಿರುವ 47 ಶಾಲೆಗಳ 1,740 ಮಕ್ಕಳಿಗೆ ಲಭಿಸಿದೆ.
ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಮೈತ್ರಿ ಸರಕಾರವು ಅಧಿಕ ಸಂಖ್ಯೆಯಲ್ಲಿರುವ ಮಕ್ಕಳ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಿಕೊಡುವ ಮಹತ್ವದ ಯೋಜನೆಗೆ ಮುಂದಾಗಿತ್ತು. ಇದಕ್ಕೆ ಕೆಲವು ಕನ್ನಡ ಪರ ಸಂಘ ಟನೆಗಳ ಮುಖಂಡರು, ಬುದ್ಧಿಜೀವಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಮೈತ್ರಿ ಸರಕಾರ ಈ ಯೋಜನೆಯಿಂದ ಹಿಂಜರಿಯದೆ ಮುಂದಡಿ ಇಟ್ಟಿತ್ತು. ಅದರ ಪರಿಣಾಮವಾಗಿ ಜಿಲ್ಲೆಯ 1,740 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರತೀ ತರಗತಿಯಲ್ಲಿ 30 ಮಕ್ಕಳ ಸೇರ್ಪಡೆಗೆ ಅವಕಾಶ, ಲಭ್ಯ ಶಿಕ್ಷಕರು ಮತ್ತು ಕೊಠಡಿಯನ್ನೇ ಬಳಸಿಕೊಳ್ಳುವುದು ಎಂಬ ಸೂತ್ರವನ್ನೂ ಮೈತ್ರಿ ಸರಕಾರ ರೂಪಿಸಿತ್ತು. ಭವಿಷ್ಯದಲ್ಲಿ ಈ ಯೋಜ ನೆಗೆ ಪೋಷಕರಿಂದ, ಶಾಲಾಭಿವೃದ್ಧಿ ಸಮಿತಿಯ ಮುಖಂಡರಿಂದ ಸಿಗುವ ಪ್ರೋತ್ಸಾಹ- ಸಹಕಾರ ವನ್ನು ಗಮನಿಸಿಕೊಂಡು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಅಂದಿನ ಸರಕಾರ ನಿರ್ಧರಿಸಿತ್ತು. ದ.ಕ. ಜಿಲ್ಲೆಯ 47 ಶಾಲೆಗಳ ಪೈಕಿ ಬಂಟ್ವಾಳ ತಾಲೂಕಿನ ವಿಟ್ಲ ಸರಕಾರಿ ಶಾಲೆಯಲ್ಲಿ ಅತ್ಯಧಿಕ ಅಂದರೆ 119 ಮಕ್ಕಳು ಮತ್ತು ಮಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಬಲ್ಮಠ ಸರಕಾರಿ ಶಾಲೆಯಲ್ಲಿ ಅತೀ ಕಡಿಮೆ ಅಂದರೆ 7 ಮಕ್ಕಳು ಕಲಿಯುತ್ತಿದ್ದಾರೆ. ಇನ್ನು ಬಂಟ್ವಾಳ ತಾಲೂಕಿನ ದಡ್ಡಲಕಾಡಿನ ಸರಕಾರಿ ಶಾಲೆಯಲ್ಲಿ 108 ಮಕ್ಕಳು ಮತ್ತು ಮಂಗಳೂರು ದಕ್ಷಿಣ ವಲಯದ ದೇರಳಕಟ್ಟೆ ಸರಕಾರಿ ಶಾಲೆಯಲ್ಲಿ 94 ಮಕ್ಕಳು ಕಲಿಯುತ್ತಿದ್ದಾರೆ.
30ಕ್ಕಿಂತ ಅಧಿಕ ಮಕ್ಕಳಿರುವ ಕೆಲವು ಶಾಲೆಗಳಲ್ಲಿ ‘ಎ’ ಮತ್ತು ‘ಬಿ’ ತರಗತಿ ಮಾಡಿದ್ದರೆ, ಕೆಲವು ಕಡೆ ಒಂದೇ ತರಗತಿಯಲ್ಲಿ ಕಲಿಸಲಾಗುತ್ತಿದೆ. ಸರಕಾರ ಲಭ್ಯ ಶಿಕ್ಷಕ, ಶಿಕ್ಷಕಿಯರನ್ನೇ ಬಳಸಲು ಸೂಚಿಸಿದ್ದರೂ ಕೆಲವು ಶಾಲೆಯ ಅಭಿವೃದ್ಧಿ ಸಮಿತಿಯವರು ದಾನಿಗಳ, ಹಳೆ ವಿದ್ಯಾರ್ಥಿ ಸಂಘಟನೆಗಳ ನೆರವು ಪಡೆದು ಅತಿಥಿ ಶಿಕ್ಷಕಿಯರನ್ನೂ ನೇಮಿಸಿದೆ. ಖಾಸಗಿ ಶಾಲೆಗಳ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನೇ ಸರಕಾರಿ ಶಾಲೆಗಳಲ್ಲೂ ನೀಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಸರಕಾರಿ ಸಮವಸ್ತ್ರವಲ್ಲದೆ, ಪ್ರತ್ಯೇಕ ಸಮವಸ್ತ್ರ, ಶೂ-ಸಾಕ್ಸ್, ಟೈ, ಐಡಿ ಕಾರ್ಡ್ ಇತ್ಯಾದಿಯನ್ನೂ ನೀಡಲಾಗುತ್ತಿದೆ. ಸದ್ಯದ ಮಟ್ಟಿಗೆ ಬಹುತೇಕ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನೇ ನೀಡಲಾಗುತ್ತಿದೆ. ಮಕ್ಕಳೂ ಕೂಡಾ ಆಸಕ್ತಿಯಿಂದ ಕಲಿಯುವ ವಾತಾವರಣ ರೂಪಿಸಲಾಗಿದೆ. ಪೋಷಕರಲ್ಲೂ ಕೂಡಾ ಆತ್ಮವಿಶ್ವಾಸ ಹೆಚ್ಚಿವೆ.
ದ.ಕ. ಜಿಲ್ಲೆಯ 47 ಸರಕಾರಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರು ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಶಾಲೆಗಳ ಆಯ್ಕೆ ಪ್ರಕ್ರಿಯೆ ರಾಜ್ಯಮಟ್ಟದಲ್ಲೇ ನಡೆದಿದೆ. ಅಧಿಕ ಮಕ್ಕಳಿರುವ ಶಾಲೆಯನ್ನೇ ಸರಕಾರ ಆಯ್ಕೆ ಮಾಡಿದೆ. ಸರಕಾರ ಹೊಸತಾಗಿ ಯಾವ ಶಿಕ್ಷಕರನ್ನೂ ನೇಮಿಸಿಲ್ಲ. ಈಗಾಗಲೆ ಲಭ್ಯ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಕರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಪ್ರತೀ ತಿಂಗಳು ಶಿಕ್ಷಣದ ಗುಣಮಟ್ಟವನ್ನು ಅರಿತುಕೊಳ್ಳಲಾಗುತ್ತದೆ. ಕೆಲವು ಮಕ್ಕಳಿಗೆ ಪಠ್ಯಪುಸ್ತಕಗಳ ಕೊರತೆಯುಂಟಾಗಿತ್ತು. ಅದನ್ನು ಪೂರೈಕೆ ಮಾಡಲಾಗುತ್ತಿದೆ. ಸದ್ಯ ಕೊಠಡಿಯ ಕೊರತೆಯೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಾಗುತ್ತದೆ ಎಂದು ದ.ಕ.ಜಿಲ್ಲೆ ಡಿಸಿಪಿಐ ವಾಲ್ಟರ್ ಡಿಮೆಲ್ಲೋ ಹೇಳಿದ್ದಾರೆ
ಮಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಬಬ್ಬುಕಟ್ಟೆ, ಕುತ್ತಾರ್, ದೇರಳಕಟ್ಟೆ ಹೀಗೆ ಎರಡ್ಮೂರು ಕಿ.ಮೀ. ಅಂತರದಲ್ಲಿ ಮೂರು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟ ಬಗ್ಗೆ ಕೆಲವರಿಗೆ ಅಸಮಾಧಾನವಿದೆ ನಿಜ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ರಾಜ್ಯಮಟ್ಟದಲ್ಲಿ ಆಯ್ಕೆ ಮಾಡಲಾದ ಪ್ರಕ್ರಿಯೆಯಿಂದ ಹೀಗಾಗಿದೆ. ಉಳ್ಳಾಲದಲ್ಲೂ ಹಲವು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಸಿಗದಿರುವ ಬಗ್ಗೆ ಅನೇಕ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಮಕ್ಕಳು ಈ ಭಾಗದಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉಳ್ಳಾಲದ ಒಂದೆರಡು ಶಾಲೆಗಳಲ್ಲಾದರೂ ಆಂಗ್ಲಮಾಧ್ಯಮ ತೆರೆಯಬೇಕು. ನಾವೀಗ ಅನುದಾನ ರಹಿತ ಶಾಲೆಗಳಲ್ಲಿ ಅನುದಾನ ಸಹಿತ ಆಂಗ್ಲಮಾಧ್ಯಮ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದೇವೆ. ಸರಕಾರ ಆ ಬಗ್ಗೆಯೂ ಗಮನ ಹರಿಸಿದರೆ ಒಳ್ಳೆಯದಿತ್ತು.
ಆಂಗ್ಲ ಮಾಧ್ಯಮ ಕಲಿಸಲು ಆಯ್ಕೆಯಾದ ಶಾಲೆಗಳು-ಮಕ್ಕಳ ಸಂಖ್ಯೆ
ಬಂಟ್ವಾಳ ವಲಯ
ಕನ್ಯಾನ ಮಾದರಿ ಶಾಲೆ 16
ಕಲ್ಲಡ್ಕ ಮಾದರಿ ಶಾಲೆ39
ಸುರಿಬೈಲ್ ಶಾಲೆ 57
ಮೂಡಾ ಶಾಲೆ 13
ದಡ್ಡಲಕಾಡು ಶಾಲೆ 18
ಪುದು ಶಾಲೆ 55
ವಿಟ್ಲ ಶಾಲೆ 119
ನರಿಂಗಾನ-ಮೊಂಟೆಪದವು ಶಾಲೆ 54
ಹೂಹಾಕುವ ಕಲ್ಲು ಶಾಲೆ 23
ಬೆಳ್ತಂಗಡಿ ವಲಯ
ಅಂಡಿಂಜೆ ಶಾಲೆ 31
ನಾವೂರು ಶಾಲೆ 31
ಬೆಳ್ತಂಗಡಿ ಮಾದರಿ ಶಾಲೆ 12
ಪೂಂಜಾಲಕಟ್ಟೆ ಶಾಲೆ 33
ಮಚ್ಚಿನ ಶಾಲೆ 49
ಬಡಗ ಕಾರಂದೂರು ಶಾಲೆ 12
ಮಂಗಳೂರು ಉತ್ತರ ವಲಯ
ಮಣ್ಣಗುಡ್ಡ ಶಾಲೆ 28
ಮಧ್ಯ ಶಾಲೆ 35
ಕಾಟಿಪಳ್ಳ 5ನೇ ಬ್ಲಾಕ್ ಶಾಲೆ 24
ಮುಲ್ಲಕಾಡು ಶಾಲೆ 24
ಬೆಂಗರೆ ಕಸಬಾ ಶಾಲೆ 73
ಬಲ್ಮಠ ಶಾಲೆ 7
ಕೆ.ಎಸ್.ರಾವ್ ನಗರ 35
ದೇರಳಕಟ್ಟೆ ಶಾಲೆ 94
ಬೋಳಿಯಾರ್ ಶಾಲೆ 16
ಮಂಗಳೂರು ದಕ್ಷಿಣ ವಲಯ
ಮುನ್ನೂರು ಶಾಲೆ 32
ಕೊಳವೂರು-ಮುತ್ತೂರು ಶಾಲೆ12
ಮುಚ್ಚೂರು ಶಾಲೆ 24
ಮಳಲಿ ಶಾಲೆ 38
ಅತ್ತಾವರ ಶಾಲೆ 20
ಪದುವಾ ಬಿಕರ್ನಕಟ್ಟೆ ಶಾಲೆ 32
ನಾಲ್ಯಪದವು ಶಾಲೆ 26
ಮೂಡುತೋಟ ಶಾಲೆ 15
ಬಬ್ಬುಕಟ್ಟೆ ಶಾಲೆ 10
ಅಂಬ್ಲಮೊಗರು ಶಾಲೆ 12
ಮೂಡುಬಿದಿರೆ ವಲಯ
ಮಿಜಾರ್ ಶಾಲೆ 26
ಬೆಳುವಾಯಿ ಮೈನ್ ಶಾಲೆ36
ಪುತ್ತೂರು ವಲಯ
ಹಿರೇಬಂಡಾಡಿ ಶಾಲೆ 41
ಕೆಯ್ಯೂರು ಮಾದರಿ ಶಾಲೆ41
ಕುಂಬ್ರ ಶಾಲೆ 38
ಕಾವು ಶಾಲೆ 36
ಉಪ್ಪಿನಂಗಡಿ ಶಾಲೆ 53
ಹಾರಾಡಿ ಶಾಲೆ 63
ನೆಲ್ಯಾಡಿ ಶಾಲೆ 53
ಕಣಿಯೂರು ಶಾಲೆ 30
ಸುಳ್ಯ ವಲಯ
ಗುತ್ತಿಗಾರು ಶಾಲೆ 28
ಗಾಂಧಿನಗರ ಶಾಲೆ 24
ಬೆಳ್ಳಾರೆ ಶಾಲೆ 62
Comments are closed.