ಕರಾವಳಿ

ಜನವರಿಯಿಂದ ಆನ್ಲೈನ್’ಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಆರಂಭ- ಜಿಲ್ಲಾಧಿಕಾರಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಸಾರ್ವಜನಿಕರು ಜನವರಿ ತಿಂಗಳಿನಿಂದ ಆಯ್ದ ಇಲಾಖೆಗಳಲ್ಲಿ ಆನ್ಲೈನ್ ಮೂಲಕ ಸಹ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಆನ್ಲೈನ್ ಮೂಲಕವೇ ಹಣ ಪಾವತಿಸಿ, ಆನ್ಲೈನ್ ಮೂಲಕವೇ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.ಅವರು ಸೋಮವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಆನ್ಲೈನ್ ಮೂಲಕ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆನ್ಲೈನ್ನಲ್ಲಿ ಮಾಹಿತಿ ಹಕ್ಕು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ, ಕಂದಾಯ, ಲೋಕೋಪಯೋಗಿ, ಆಹಾರ ಮತ್ತು ನಾಗರೀಕ ಸರಬರಾಜು, ಒಳಾಡಳಿತ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಇಲಾಖೆಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಈ ಹಿಂದಿನಂತೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಸಹ ಮುಂದುವರೆಯಲಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಸಾರ್ವಜನಿಕರು ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ನಿಗಧಿತ ಶುಲ್ಕ ಪಾವತಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೋರುವ ಮಾಹಿತಿಯನ್ನು ಆದಷ್ಟು ಶೀಘ್ರದಲ್ಲಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಯಾವುದೇ ಕಾರಣಕ್ಕೂ ಕೋರಿರುವ ಮಾಹಿತಿ ಕಚೇರಿಯಲ್ಲಿ ಇಲ್ಲವಾದಲ್ಲಿ, ಹೊಸದಾಗಿ ಮಾಹಿತಿಯನ್ನು ಸೃಷ್ಠಿಸಬೇಡಿ, ಇರುವ ಮಾಹಿತಿಯನ್ನಷ್ಟೇ ನೀಡಿ ಎಂದು ತಿಳಿಸಿದರು.

ರಾಜ್ಯದ ಸರಕಾರಿ ಇಲಾಖೆಗಳಲ್ಲಿ ಹೊಸದಾಗಿ ಜಾರಿಗೆ ಬಂದ ಯಾವುದೇ ತಂತ್ರಜ್ಞಾನ ಹಾಗೂ ಆಡಳಿತ ವಿಧಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಮತ್ತು ಅದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮವಾಗಿದ್ದು, ಈ ಆನ್ಲೈನ್ ಮಾಹಿತಿ ಹಕ್ಕು ವ್ಯವಸ್ಥೆಯನ್ನೂ ಸಹ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಲ್ಲಿ ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮುಂದಿನ ಹಂತದಲ್ಲಿ ಕಚೇರಿಯ ವಿಷಯ ನಿರ್ವಾಹಕರು ಮತ್ತು ಕಂಪ್ಯೂಟರ್ ಆಪರೇಟರ್ಗಳಿಗೆ ಸಹ ತರಬೇತಿಯನ್ನು ಆಯೋಜಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಹಾಗೂ ಆನ್ಲೈನ್ ಮಾಹಿತಿ ಹಕ್ಕು ವ್ಯವಸ್ಥೆಯ ಜಿಲ್ಲಾ ಸಮನ್ವಯ ಅಧಿಕಾರಿ ಬಿ.ಸದಾಶಿವ ಪ್ರಭು, ಆನ್ಲೈನ್ನಲ್ಲಿ ಮಾಹಿತಿ ಹಕ್ಕು ಅರ್ಜಿ ಸ್ವೀಕಾರ ಮತ್ತು ವಿಲೇವಾರಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು, ಪೊಲೀಸ್ ಇಲಾಖೆ, ಲೋಕೋಪಯೋಗಿ, ನಗರಾಭಿವೃದ್ದಿ, ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.