ಉಡುಪಿ: ಜಿಲ್ಲೆಯಲ್ಲಿ 80% ಜನರು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಡತನದಲ್ಲಿರುವ ಈ ಕುಟುಂಬಗಳಿಗೆ ತಮ್ಮದೇ ಆದ ಸ್ವಂತ ಮನೆ ನಿರ್ಮಾಣ ಮಾಡುವ ಕನಸಿದ್ದು, ಆ ಕನಸನ್ನು ನನಸು ಮಾಡಲು ಕರ್ನಾಟಕ ಕೊಳಗೇರಿ ಮಂಡಳಿ ಮತ್ತು ನಗರಸಭೆ ಸಜ್ಜಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು. ಅವರು, ಶನಿವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಉಡುಪಿ ನಗರಸಭೆ ವತಿಯಿಂದ ನಿವೇಶನ ರಹಿತರಿಗೆ ವಸತಿ ನಿರ್ಮಾಣ ಮಾಡಲು ಮಂಜೂರಾತಿ ದೊರೆತಿದ್ದು, ಸರಳೇಬೆಟ್ಟುವಿನಲ್ಲಿ 8.22 ಎಕರೆ ಜಾಗ ಗುರುತಿಸಲಾಗಿದೆ. ಜನವರಿ 8 ರಂದು ವಸತಿ ಸಮುಚ್ಚಯದ ಶಂಕುಸ್ಥಾಪನೆ ನಡೆಸಲು ಉದ್ದೇಶಿಸಲಾಗಿದ್ದು, ಕರ್ನಾಟಕ ಸರಕಾರದ ವಸತಿ ಸಚಿವರಾದ ವಿ. ಸೋಮಣ್ಣ, ಕಂದಾಯ ಸಚಿವರಾದ ಆರ್.ಅಶೋಕ್ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಮಾರಂಭಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೊಳಗೇರಿ ಮಂಡಳಿ ಮತ್ತು ನಗರಸಭೆಯ ವತಿಯಿಂದ ನಿರ್ಮಿಸಿ ಕೊಡಲಾಗುವ ವಸತಿ ಸಮುಚ್ಚಯ ಒಂದು ವಿನೂತನ ಯೋಜನೆಯಾಗಿದ್ದು, ಕೇಂದ್ರ ಸರಕಾರ, ರಾಜ್ಯ ಸರಕಾರ, ನಗರಸಭೆ ಮತ್ತು ಫಲಾನುಭವಿಗಳ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದೆ. ವಸತಿ ಸಮುಚ್ಚಯ ನಿರ್ಮಾಣ ಮಾಡಲು ಈಗಾಗಲೇ ಸರಳೇಬೆಟ್ಟುವಿನಲ್ಲಿ ಜಾಗ ಮಂಜೂರಾಗಿದ್ದು, ಮೊದಲನೆ ಹಂತದಲ್ಲಿ 460 ಮನೆಗಳನ್ನು ಮತ್ತು ಎರಡನೆ ಹಂತದಲ್ಲಿ 264 ಮನೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ 1200 ರಷ್ಟು ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. 350 ಸ್ಕ್ವೇರ್ ಫೀಟಿನ ಒಂದು ಮನೆ ನಿರ್ಮಿಸಲು 7,42,994.00 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಕೇಂದ್ರ ಸರಕಾರವು ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1,50,000.00 ಲಕ್ಷ ರೂ. ಗಳನ್ನು, ರಾಜ್ಯ ಸರಕಾರವು ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ 2,00,000.00 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1,20,000.00 ಲಕ್ಷ ರೂ. ಗಳನ್ನು ನೀಡಲಿದ್ದು, ಫಲಾನುಭವಿಗಳು ಪರಿಶಿಷ್ಟ ಜಾತಿ, ಪಂಗಡದವರಾಗಿದ್ದರೆ 60,000 ರೂ. ಮತ್ತು ಸಾಮಾನ್ಯ ವರ್ಗದವರಾಗಿದ್ದರೆ 90,000 ರೂ.ಗಳನ್ನು ಪಾವತಿಸಬೇಕು. ನಗರಸಭೆಯು ಪ್ರತಿ ಮನೆಗೆ 74,299 ರೂ.ಗಳ ಅನುದಾನವನ್ನು ನೀಡಲಾಗುತ್ತದೆ. ಬ್ಯಾಂಕ್ ಆಫ್ ಬರೋಡಾದಿಂದ 8.25% ಬಡ್ಡಿದರದಲ್ಲಿ ಲೋನ್ ಸೌಲಭ್ಯವಿದ್ದು, ಫಲಾನುಭವಿಗಳು ಲೋನ್ ಪಡೆಯಲು ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಸತಿ ಸಮುಚ್ಚಯವನ್ನು ಒಂದೂವರೆ ವರ್ಷದ ಒಳಗೆ ನಿರ್ಮಾಣ ಮಾಡಿ ಬಡವರಿಗೆಕೊಡುವ ಆಸೆ ಇದೆ. ರಾಜ್ಯದಲ್ಲಿ ಬೆಂಗಳೂರನ್ನು ಹೊರತುಪಡಿಸಿ, ಬೇರಾವುದೇ ಜಿಲ್ಲೆಯಲ್ಲಿ ಮೂರು ಮಹಡಿಯ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಾಣದ ವ್ಯವಸ್ಥೆ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಡವರಿಗೆ ಅತಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಿಕೊಡುವ ಈ ಯೋಜನೆಗೆ ಬಲ ನೀಡಿ ಸರ್ವರಿಗೂ ಸೂರು ಒದಗಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಸಣ್ಣಕ್ಕಿ ಬೆಟ್ಟುವಿನ 1.12 ಎಕರೆಯಲ್ಲಿ 130 ಮನೆಗಳ ಮತ್ತು ಸುಬ್ರಮಣ್ಯ ನಗರದ 60 ಸೆಂಟ್ಸ್ ಜಾಗದಲ್ಲಿ 60 ಮನೆಗಳ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಪೌರಾಯುಕ್ತ ಡಾ.ಆನಂದ್ .ಚಿ.ಕಲ್ಲೋಳಿಕರ್, ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಮತ್ತಿತರರು ಹಾಜರಿದ್ದರು.
Comments are closed.