ಕರಾವಳಿ

ಡ್ರಗ್ಸ್ ಜಾಲವನ್ನು ಮಟ್ಟಹಾಕಿ, ಕಿಂಗ್‍ಪಿನ್‍ಗಳನ್ನು ಬಂಧಿಸಿ: ಸಚಿವ ಬಸವರಾಜ ಬೊಮ್ಮಾಯಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿರುವ ಮರಳು ಸಮಸ್ಯೆ, ಕ್ವಾರಿ ಸಮಸ್ಯೆ ಮತ್ತು ಡೀಮ್ಡ್ ಫಾರೆಸ್ಟ್ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಿ ಸರಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಅಂಬೇಡ್ಕರ್ ನಿಗಮ, ವಾಲ್ಮೀಕಿ ನಿಗಮ ಮತ್ತು ದೇವರಾಜ್ ಅರಸು ನಿಗಮದ ವತಿಯಿಂದ ಅನುಮೋದನೆಯಾಗಿರುವ ಎಲ್ಲಾ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ 2018-19 ನೇ ಸಾಲಿನ ಬಾಕಿ ಇರುವ ಬೋರ್‍ವೆಲ್ ಕೊರೆಸುವ, ಪಂಪ್‍ಸೆಟ್ ಹಾಕಿ ವಿದ್ಯುತ್ ಸಂಪರ್ಕ ಒದಗಿಸುವ ಕಾಮಗಾರಿಗಳನ್ನು ಮಾರ್ಚ್ 31ರ ಒಳಗೆ ಪೂರ್ಣಗೊಳಿಸಬೇಕು ಹಾಗೂ ಈ ಕಾಮಗಾರಿಗಳ ಜೊತೆ ಜೊತೆಗೆ 2019-2020 ನೇ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಜಿಲ್ಲಾಧಿಕಾರಿಯವರ ಮೇಲುಸ್ತುವಾರಿಯಲ್ಲಿ ಈ ಯೋಜನೆಗಳು ಕಾಲಮಿತಿ ಒಳಗಡೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವರು ಆದೇಶಿಸಿದರು.  ನಿಗಮದ ವತಿಯಿಂದ ನಡೆಸಲಾಗುವ ಎಲ್ಲಾ ಯೋಜನೆಗಳು ಮತ್ತು ಕಾಮಗಾರಿಗಳ 3 ವರ್ಷದ ಪ್ರಗತಿಯ ವರದಿಯನ್ನು ಸಲ್ಲಿಸಬೇಕು, ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು. ಕೊರಗರ ಅಭಿವೃದ್ಧಿಗಾಗಿ ಈಗಾಗಲೇ 10 ಕೋಟಿ ಬಿಡುಗಡೆಯಾಗಿದ್ದು, 636 ಲಕ್ಷ ರೂಪಾಯಿ ಗಳ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, 27 ಕಾಮಗಾರಿಗಳು ಪೂರ್ಣಗೊಂಡಿದ್ದು, 25 ಕಾಮಗಾರಿಗಳು ಪ್ರಗತಿಯಲ್ಲಿದೆ. ಇದರಲ್ಲಿ 16 ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಮತ್ತು 9 ಕಾಮಗಾರಿಗಳನ್ನು ಏಪ್ರಿಲ್ ಅಂತ್ಯದೊಳಗೆ ಮುಗಿಸುವುದಾಗಿ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು ಮತ್ತು ವೆಂಟೆಂಡ್ ಡ್ಯಾಂಗಳಿಂದ ಹೊರತೆಗೆದ ಹೂಳಿನಿಂದ ಮರಳನ್ನು ಪ್ರತ್ಯೇಕಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡುವ ಜವಾಬ್ದಾರಿ ಮೂರೂ ತಾಲೂಕಿನ ಇ.ಓ ಗಳದಾಗಿದ್ದು, ಮರಳಿನ ಮಾರಾಟದಿಂದ ಬಂದ ಆದಾಯವನ್ನು ನದಿಗಳಿಂದ ಹೂಳು ತೆಗೆಯಲು ಉಪಯೋಗಿಸುವಂತೆ ಇ.ಓ ಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, 3 ಕಾಮಗಾರಿಗಳು ಪೂರ್ಣಗೊಂಡಿವೆ. ರಾಜ್ಯ ಹೆದ್ದಾರಿಗಳ ಅಗಲೀಕರಣ ಕಾರ್ಯಗಳು ನಡೆಯಲಿದ್ದು, ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಎಲ್ಲಾ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಕೂರಿಸುವ ಕೆಲಸಗಳನ್ನು ಮಾರ್ಚ್ ಒಳಗೆ ಪೂರ್ಣ ಗೊಳಿಸಬೇಕು, ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರವನ್ನು ಕೂಡಲೇ ಕೊಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಸಚಿವರು, ಪ್ರವಾಹದಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳ ರಿಪೇರಿ ಕಾಮಗಾರಿಗಳ ಮಾಹಿತಿ ಕೇಳಿದರು. ಒಟ್ಟು 166 ಕಟ್ಟಡಗಳು ಭಾಗಶಃ ಹಾನಿಗೊಳಗಾಗಿದ್ದು, 40 ಶಾಲೆಗಳ ರಿಪೇರಿ ಕಾರ್ಯ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಜಿಲ್ಲೆಯಲ್ಲಿ 1,39,000 ರೈತರು ಹೆಸರು ನೋಂದಾಯಿಸಿದ್ದು ಇದರಲ್ಲಿ ಫಲಾನುಭವಿ ರೈತರಿಗೆ 3 ಕಂತುಗಳಲ್ಲಿ ಪಿಂಚಣಿ ಪಾವತಿಯಾಗಿದೆ ಮತ್ತು ನಾಲ್ಕನೇ ಕಂತು ಬಿಡುಗಡೆಯಾಗಲಿದೆ. 1191 ರೈತರಿಗೆ ಬೆಲೆ ಪರಿಹಾರ ನೀಡಲು ಫಲಾನುಭವಿಗಳ ಹೆಸರನ್ನು ನೋಂದಾಯಿಸಲಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.  2019-20 ನೇ ಸಾಲಿನಲ್ಲಿ ನೆರೆ ಪರಿಹಾರಕ್ಕಾಗಿ 20 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ 485 ಗ್ರಾಮೀಣಾಭಿವೃದ್ಧಿ ಕಾಮಗಾರಿಗಳು, 201 ನಿರ್ಮಿತಿ ಕಾಮಗಾರಿಗಳು, 128 ನಗರಾಭಿವೃದ್ಧಿ ಕಾಮಗಾರಿಗಳು ಹಾಗೂ ಎ.ಬಿ ಮತ್ತು ಸಿ ವರ್ಗದಲ್ಲಿ ಕ್ರಮವಾಗಿ 46, 144 ಮತ್ತು 112 ಮನೆಗಳ ಕಾಮಗಾರಿಗಳಿಗೆ ಹಣಕಾಸು ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಸವ ಕಲ್ಯಾಣ ಯೋಜನೆಯಡಿ ಮನೆ ನಿರ್ಮಾಣಕ್ಕೆ ಉಂಟಾಗಿರುವ ಸಮಸ್ಯೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ವಿಸ್ತøತ ವರದಿಯನ್ನು ತಯಾರಿಸಿ ವಸತಿ ಸಚಿವರಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಡ್ರಗ್ಸ್ ಮಾದಕ ಜಾಲದ ಮೇಲೆ ಶೂನ್ಯ ಸಹಿಷ್ಣುತೆಯನ್ನು ಹೊಂದಬೇಕು. ಡ್ರಗ್ಸ್ ಮಾಫಿಯಾದ ಮೇಲೆ ಯುದ್ಧ ಸಾರಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಿ, ಈ ಜಾಲದಲ್ಲಿ ತೊಡಗಿರುವ ಕಿಂಗ್‍ಪಿನ್‍ಗಳನ್ನು ಕೂಡಾ ಬಂಧಿಸಿ ಜಾಲವನ್ನು ನಿಷ್ಕ್ರಿಯಗೊಳಿಸಬೇಕು ಎಂದು ಜಿಲ್ಲಾ ಎಸ್.ಪಿ ಎನ್. ವಿಷ್ಣುವರ್ಧನ್ ಅವರಿಗೆ ಆದೇಶ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿಧಾನಸಭೆಯ ಮುಖ್ಯ ಸಚೇತಕ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಎಸ್.ಪಿ ಎನ್ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿ.ಎಫ್.ಓ ಕಮಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಕೌಡೂರು, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.