ಉಡುಪಿ: ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಿಗೆ ಆಟದ ಮೈದಾನವನ್ನು ನಿರ್ಮಿಸಿ, ಆಟೋಟಗಳಿಗೆ ಒತ್ತು ನೀಡಿ ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಆದ್ಯತೆ ನೀಡಬೇಕೆಂದು ಸರಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 580 ಸರಕಾರಿ ಶಾಲೆಗಳಿದ್ದು, ಅದರಲ್ಲಿ ಮೊದಲನೆ ಹಂತದಲ್ಲಿ ಕನಿಷ್ಠ 30 ಶಾಲೆಗಳ ಗುರಿ ನಿಗದಿ ಮಾಡಿಕೊಂಡು ಶಾಲಾ ಮಕ್ಕಳ ಆಟ-ಪಾಠಕ್ಕೆ ಉಪಯೋಗವಾಗುವಂತಹ ವಿಶಾಲವಾದ ಆಟದ ಮೈದಾನಗಳನ್ನು ನಿರ್ಮಿಸಿಕೊಡಲು ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ಯುವ ಜನ ಸಬಲೀಕರಣ ಇಲಾಖಾಧಿಕಾರಿಗಳು ಜೊತೆಯಾಗಿ ಸೇರಿ ಸಮಾಲೋಚನೆ ನಡೆಸಿ ಈ ಕೆಲಸವನ್ನು ಅನುಷ್ಟಾನಗೊಳಿಸಿ ಮುಂದಿನ ಸಭೆಯ ಅವಧಿಯಲ್ಲಿ ಕಾರ್ಯಗತಗೊಳಿಸಿದ ವರದಿಯ ಜೊತೆ ಹಾಜರಾಗಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೃಷಿ ಮತ್ತು ತೋಟಗಾರಿಕೆ ಕೇಂದ್ರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗದ್ದೆಗಳಲ್ಲಿ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಾಧ್ಯವೆ ಎಂದು ಪರಿಶೀಲಿಸಿ ಆಸಕ್ತಿ ಉಳ್ಳವರಿಗೆ ಪ್ರೋತ್ಸಾಹ ನೀಡಿ ಮೀನುಗಾರಿಕೆಯನ್ನು ಉತ್ತೇಜಿಸಬೇಕು. ನಬಾರ್ಡ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ನಿಧಿಯನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗುವಂತಹ ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಬೇಕು. ಬೇಸಿಗೆಯಲ್ಲಿ ನದಿಗಳು ಒಣಗುವ ಸಾಧ್ಯತೆಗಳಿದ್ದು, ನದಿ ಪಾತ್ರದಲ್ಲಿರುವ ರೈತರು ಸೂಕ್ಷ್ಮ ನೀರಾವರಿ ಪದ್ದತಿಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವಂತೆ ಅವರ ಮನವೊಲಿಸಬೇಕು ಎಂದು ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದಾಗಿ ಹಾನಿಗೊಳಗಾದ ಎ ಮತ್ತು ಬಿ ಕೆಟಗರಿ ಮನೆಗಳಲ್ಲಿ ಉಡುಪಿಯಲ್ಲಿ 53 ಮನೆಗಳಲ್ಲಿ 9 ಮನೆಗಳಿಗೆ ಜಿಪಿಎಸ್ ಆಗಿದ್ದು 1 ಮನೆಗೆ ಅಡಿಪಾಯ ಹಾಕಲಾಗಿದೆ, ಉಳಿದ ಮನೆಗಳನ್ನು ನಿರ್ಮಿಸಲು ಸಾಮಾಗ್ರಿಗಳು ಪೂರೈಕೆಯಾಗಿವೆ. ಕುಂದಾಪುರದಲ್ಲಿ ಒಟ್ಟು 26 ಮನೆಗಳಲ್ಲಿ 5 ಮನೆಗಳ ದುರಸ್ತಿ ಕಾರ್ಯ ನಡೆದಿದೆ, 1 ರ ಗೋಡೆ ನಿರ್ಮಾಣ, 6 ಮನೆಗಳಿಗೆ ಅಡಿಪಾಯ ಹಾಕಲಾಗಿದೆ ಇನ್ನುಳಿದ ಮನೆಗಳ ಕಾಮಗಾರಿ ಪ್ರಾರಂಭಿಸಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿ, ಮನೆ ನಿರ್ಮಾಣ ಮಾಡಲು ಆಸಕ್ತಿ ತೋರುವವರಿಗೆ ಗಡುವು ನೀಡಿ ಬಾಕಿ ಇರುವ ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಿಂದ ಬಾಕಿ ಉಳಿದಿರುವ ಶಾಲಾ ಕಟ್ಟಡದ ದುರಸ್ತಿ ಕಾರ್ಯಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂಣಗೊಳಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಕೇಳಿದಾಗ, ಅಣೆಕಟ್ಟಿನಲ್ಲಿ ನೀರು ಶೇಖರಿಸಲಾಗಿದೆ. ನೀರಿನ ಸಂಪರ್ಕ ನೀಡಲಾಗಿದ್ದು, ವಿದ್ಯುತ್ ಸಂಪರ್ಕದ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದರು.
ಅಂಗನವಾಡಿ ಭೇಟಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. 39 ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು, 22 ಅಧಿಕಾರಿಗಳು ಮೊದಲನೆ ಸುತ್ತಿನ ವರದಿಯನ್ನು ಇಲಾಖೆಗೆ ನೀಡಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್. ಶೇಷಪ್ಪ ಹೇಳಿದಾಗ, ಎಲ್ಲಾ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಅಂಗನವಾಡಿಗಳಿಗೆ ಭೇಟಿ ನೀಡಿ ಪ್ರತಿ ತಿಂಗಳೂ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಟ್ಟಡದ ನೀಲನಕ್ಷೆ ತಯಾರಿಸಲಾಗಿದ್ದು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಈ ಬಗ್ಗೆ ಪ್ರಸ್ತಾವನೆಯಾಗಲಿದೆ. ಜಿಲ್ಲೆಯಲ್ಲಿ 299 ವೈದ್ಯಕೀಯ ಯಂತ್ರೋಪಕರಣಗಳು ಕಾರ್ಯನಿರ್ವಹಿಸುತ್ತಿದ್ದು, 40 ಉಪಕರಣಗಳು ಹಾಳಾಗಿವೆ ಎಂದು ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ತಿಳಿಸಿದರು. ರಿಪೇರಿ ಆಗಬೇಕಾದ ಉಪಕರಣಗಳ ಲೆಕ್ಕಪರಿಶೋಧನೆ ನಡೆಸಿ ರಿಪೇರಿ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಅರಣ್ಯ ಇಲಾಖೆಯ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಜಮೀನಿನ ಸರ್ವೆ ನಡೆಯದಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದ್ದು, ಕ್ವಾರಿ ಕ್ರಷರ್‍ಗಳಿಗೆ ಅನುಮತಿ ನೀಡಲು ತೊಂದರೆಯಾಗುತ್ತಿರುವುದನ್ನು ಮನಗಂಡ ಉಸ್ತುವಾರಿ ಕಾರ್ಯದರ್ಶಿಗಳು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸರ್ವೆಯರ್‍ಗಳು ಜಂಟಿಯಾಗಿ ಸರ್ವೆ ನಡೆಸಿ ಗೊಂದಲಗಳನ್ನು ಪರಿಹರಿಸಿ ಕ್ವಾರಿ ಕ್ರಷರ್‍ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕು. ಮೊದಲು ಚಿಕ್ಕ ಜಮೀನುಗಳನ್ನು ಸರ್ವೆ ಮಾಡಿ ಮುಂದಿನ ಹಂತದಲ್ಲಿ ದೊಡ್ಡ ಜಮೀನುಗಳ ಸರ್ವೆ ನಡೆಸಬೇಕು ಮತ್ತು ಎಲ್ಲಾ ತಾಲೂಕುಗಳ ತಹಸೀಲ್ದಾರ್‍ಗಳು ಮತ್ತು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಈ ಕಾರ್ಯಗಳು ನಡೆಯಬೇಕು ಎಂದು ಸೂಚಿಸಿದರು.
ಕುಂದಾಪುರ ಎಸಿ ಕೆ. ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಮಲ, ಕಾರ್ಕಳ ಮತ್ತು ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಎಲ್ಲಾ ತಾಲೂಕುಗಳ ತಹಸೀಲ್ದಾರ್‍ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Comments are closed.