ಕರಾವಳಿ

ಭ್ರೂಣದ ಸ್ಕ್ಯಾನಿಂಗ್ ಚಿತ್ರ, ಸಿ.ಡಿ ಮಾಡದಂತೆ ಸೂಚನೆ

Pinterest LinkedIn Tumblr

ಉಡುಪಿ: ಜಿಲ್ಲಾ ಮಟ್ಟದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುದೀರ್ ಚಂದ್ರ ಸೂಡ ಅವರ ಅಧ್ಯಕ್ಷತೆಯಲ್ಲಿ ಅಜ್ಜರಕಾಡಿನ ಡಿ.ಎಚ್.ಓ ಕಚೇರಿಯಲ್ಲಿ ಜರುಗಿತು.  ಭ್ರೂಣದ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಭ್ರೂಣದ ಸ್ಕ್ಯಾನಿಂಗ್ ಮಾಡಿದ ಚಿತ್ರ ಅಥವಾ ಸಿ.ಡಿಗಳನ್ನು ಬಳಸಿಕೊಂಡು ಭ್ರೂಣದ ಲಿಂಗ ಪತ್ತೆ ಮಾಡುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭ್ರೂಣದ ಚಿತ್ರಗಳನ್ನಾಗಲೀ, ಸಿ.ಡಿಗಳನ್ನಾಗಲೀ ನೀಡದಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪಿಸಿ & ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಟಾನ ಆಗುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಪಿಸಿ & ಪಿ.ಎನ್.ಡಿ.ಟಿ ಕಾಯ್ದೆಗಳನ್ನು ಉಲ್ಲಂಘಿಸಿರುವ ಸಾಕ್ಷ್ಯಾಧಾರಗಳು ದೊರೆತಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳುವ ನಿಂಬಧನೆಗಳಿದ್ದು, ಅದರಂತೆಯೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿಯಲ್ಲಿ 24 ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿದ್ದು, ಪಿಸಿ & ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಂಘಿಸಿರುವ ಒಂದು ಸಂಸ್ಥೆಗೆ ನೋಟೀಸು ನೀಡಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಇದುವರೆಗೆ 20 ಸೆಂಟರ್‍ಗಳಿಗೆ ಭೇಟಿ ನೀಡಿದ್ದು, ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ರೂಲ್ ನಂಬ್ರ 8 ರ ಪ್ರಕಾರ 3 ಸಂಸ್ಥೆಗಳಿಗೆ ಮತ್ತು ನಾನ್ ಮೆಂಟೇನೆನ್ಸ್ ಆಫ್ ರೆಕಾರ್ಡ್ ರೂಲ್ ನಂಬ್ರ 29 ರ ಪ್ರಕಾರ 1 ಸಂಸ್ಥೆಗೆ ನೋಟೀಸ್ ನೀಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮ್ ರಾವ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಿಸಿ & ಪಿ.ಎನ್.ಡಿ.ಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್ ಕುಮಾರ್, ಪಿಸಿ & ಪಿ.ಎನ್.ಡಿ.ಟಿ ಸಲಹಾ ಸಮಿತಿ ಸದಸ್ಯೆ ಡಾ. ಪಾರ್ವತಿ ಭಟ್, ಕೆ.ಎಂ.ಸಿ ಮಣಿಪಾಲದ ಡಿ.ಸಿ.ಎಚ್ ಡಿ.ಎನ್.ಬಿ ಶಿಶು ತಜ್ಞ ಡಾ.ಸುನಿಲ್ .ಸಿ. ಮುಂಡ್ಕೂರು, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷೆ ಶೋಭಾ ಎಂ ಹೆಗ್ಡೆ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ.ದೀಕ್ಷಿತ, ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲೆಯ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಜ್ಯೋತಿ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.

Comments are closed.