ಕರಾವಳಿ

ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಪ್ರಮಾಣ ಹೆಚ್ಚಳ: ಸಚಿವ ಕೆ.ಗೋಪಾಲಯ್ಯ

Pinterest LinkedIn Tumblr

ಉಡುಪಿ: ಕರಾವಳಿಯಲ್ಲಿ ನಾಡ ದೋಣಿಯನ್ನು ಅವಲಂಬಿಸಿರುವ ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಸರಕಾರ ಬದ್ದವಾಗಿದೆ. ನಾಡದೋಣಿ ಮೀನುಗಾರರಿಗೆ ಸರಕಾರದ ವತಿಯಿಂದ ಪ್ರಸ್ತುತ 210 ರಿಂದ 230 ಲೀಟರ್ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಮೀನುಗಾರರು ಕನಿಷ್ಠ 400 ಲೀಟರ್ ಸೀಮೆ ಎಣ್ಣೆಗೆ ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಸೀಮೆ ಎಣ್ಣೆ ವಿತರಣೆಯಲ್ಲಿ ಹೆಚ್ಚಳ ಮಾಡಿ ಬಡ ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ.ಗೋಪಾಲಯ್ಯ ಹೇಳಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಉಡುಪಿಯಲ್ಲಿ 4300 ನಾಡದೋಣಿ ಮೀನುಗಾರರಿದ್ದು, ಈ ದೋಣಿಗಳು ಕಾರ್ಯನಿರ್ವಹಿಸಲು ಸೀಮೆ ಎಣ್ಣೆಯ ಅಗತ್ಯವಿದೆ. ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸುವುದರಿಂದ ಮೀನುಗಾರರಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕುಂಟಾಗಿದ್ದು, ಇಲ್ಲಿವರೆಗೆ 352154 ಸದಸ್ಯರ ಇ-ಕೆವೈಸಿ ಸಂಗ್ರಹಣೆಯಾಗಿದ್ದು, ಶೇ. 44 ಪ್ರಗತಿ ದಾಖಲಾಗಿದೆ. ಮುಂದಿನ ಎರಡು ತಿಂಗಳಿನವರೆಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಇ-ಕೆವೈಸಿ ನೋಂದಣಿಯನ್ನು ಕೈಗೊಂಡು ಶೇ.100 ಪ್ರಗತಿ ಸಾಧಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ 28333 ಅಂತ್ಯೋದಯ, 161609 ಆದ್ಯತಾ ಪಡಿತರ ಚೀಟಿಗಳು, 100236 ಆದ್ಯತೇತರ ಪಡಿತರ ಚೀಟಿಗಳಿದ್ದು, ಒಟ್ಟು 290178 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. 190686 ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‍ಗೆ ಜೋಡಣೆ ಮಾಡಲಾಗಿದ್ದು, ಶೇ.100 ಪ್ರಗತಿ ಸಾಧಿಸಲಾಗಿದೆ. 798735 ಕುಟುಂಬಗಳ ಸದಸ್ಯರಿಗೆ ಬಯೋಮೆಟ್ರಿಕ್ ಮೂಲಕ ಆಹಾರ ವಿತರಣೆ ನಡೆಸಲಾಗುತ್ತಿದೆ. ಒಟ್ಟು 292 ನ್ಯಾಯಬೆಲೆ ಅಂಗಡಿಗಳು, 3 ಟಿಎಪಿಸಿಎಂಎಸ್ ಸಗಟು ಮಳಿಗೆಗಳು 24 ಎಲ್.ಪಿ.ಜಿ ವಿತರಕರು ಮತ್ತು 97 ಪೆಟ್ರೋಲ್ ಬಂಕ್ ಗಳಿವೆ. ಜಿಲ್ಲೆಯ 292 ನ್ಯಾಯ ಬೆಲೆ ಅಂಗಡಿಗಳಲ್ಲಿ 291 ಅಂಗಡಿಗಳನ್ನು ಪಿ.ಓ.ಎಸ್ ಆಗಿ ಪರಿವರ್ತಿಸಲಾಗಿದೆ. ಬಯೋಮೆಟ್ರಿಕ್ ನೀಡಲು ಸಾಧ್ಯವಾಗದ 1327 ಅಂಗವಿಕಲರು, ಅಶಕ್ತರು ಮತ್ತು ವಯೋವೃದ್ದರನ್ನು ಗುರುತಿಸಿ ಬಯೋಮೆಟ್ರಿಕ್ ನೀಡುವುದರಿಂದ ವಿನಾಯತಿ ನೀಡಿ ಪಡಿತರ ಚೀಟಿ ವಿತರಿಸಲಾಗಿದೆ.

ಪ್ರತಿ ತಿಂಗಳೂ ಜಿಲ್ಲೆಯಲ್ಲಿ 5492.910 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯಾಗುತ್ತಿದ್ದು, ಎನ್.ಎಫ್.ಎಸ್.ಎ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ಕಲ್ಯಾಣ ಸಂಸ್ಥೆಗಳಲ್ಲಿರುವ 36000 ಫಲಾನುಭವಿಗಳಿಗೆ ಪ್ರತಿ ತಿಂಗಳೂ 10 ಕೆ.ಜಿ ಅಕ್ಕಿ ಮತ್ತು 5 ಕೆ.ಜಿ ಗೋಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ.  ಇದುವರೆಗೂ 7933 ಆದ್ಯತಾ ಪಡಿತರ ಚೀಟಿ ಸ್ವೀಕೃತವಾಗಿದ್ದು, 4611 ಅರ್ಜಿ ವಿಲೇವಾರಿಯಾಗಿದ್ದು, 3322 ಬಾಕಿ ಇದೆ. 6155 ಆದ್ಯತೇತರ ಚೀಟಿಗಳು ಸ್ವೀಕೃತವಾಗಿದ್ದು, 2509 ವಿಲೇವಾರಿಯಾಗಿದ್ದು, 3646 ಬಾಕಿ ಇದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಅನಿಲ ಭಾಗ್ಯ ಯೋಜನೆಯಡಿ 1106 ಗುರಿ ನಿಗದಿಪಡಿಸಲಾಗಿದ್ದು, ಶೇ100% ಗುರಿ ಸಾಧಿಸಲಾಗಿದೆ. 1874 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್ ಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದಾಗ, ಪ್ರತಿಕ್ರಿಯಿಸಿದ ಅಧಿಕಾರಿಗಳು ಕಲಬೆರಕೆ ತಪಾಸಣೆ ನಡೆಸಲು ಪ್ರತ್ಯೇಕ ಲ್ಯಾಬ್ ಮತ್ತು ಕಿಟ್‍ನ ಅಗತ್ಯವನ್ನು ಸಚಿವರಿಗೆ ಮನಗಾಣಿಸಿದರು. ಪ್ರತಿಕ್ರಿಯಿಸಿದ ಸಚಿವರು ಇಲಾಖೆಗೆ ಅಗತ್ಯವಿರುವ ಲ್ಯಾಬ್ ಮತ್ತು ಕಿಟ್ ಒದಗಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

ಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಹುದ್ದೆ ಭರ್ತಿ ಮಾಡಲಾಗಿದ್ದು, 18 ಖಾಲಿ ಇದೆ. 6 ಜನ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯ ವತಿಯಿಂದ ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿರುವ ತೂಕ/ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‍ಗಳನ್ನು ತಪಾಸಣೆ ನಡೆಸಿ ಉಲ್ಲಂಘನೆ ನಡೆಸಿದ್ದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಾಪನ ಶಾಸ್ತ್ರ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Comments are closed.