ಪಟ್ಲ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ.
ಸುರತ್ಕಲ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸುರತ್ಕಲ್ ಘಟಕದ 2ನೇ ವರ್ಷದ ಪಟ್ಲ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಜರಗಿತು.
ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಇಡ್ಯಾ ಐ ರಮಾನಂದ ಭಟ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಭಿಮಾನಿಗಳ ಕೂಡುವಿಕೆಯಲ್ಲಿ ಪಟ್ಲ ಸಂಭ್ರಮ ಯಶಸ್ವಿಯಾಗಿ ನಡೆಯಲಿ. ಈ ಸಂಸ್ಥೆಯು ಮುಂದೆಯೂ ಬೆಳಗಿ ಯಕ್ಷಗಾನದ ಕಲಾವಿದರಿಗೆ ಒಳ್ಳೆಯ ಪ್ರಯೋಜನ ಸಿಗುವಂತಾಗಲಿ ಎಂದು ಶುಭಹಾರೈಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಪಟ್ಲ ಫೌಂಡೇಶನ್ ಉನ್ನತ ಮಟ್ಟಕ್ಕೆ ಬೆಳೆಯಲು ಎಲ್ಲರ ಸಹಕಾರ ಕಾರಣ. ಸಜ್ಜನರೆಲ್ಲಾ ಒಟ್ಟಾಗಿ ಒಳ್ಳೆಯ ಕೆಲಸ ಮಾಡುವಾಗ, ದೇವರ ಅನುಗ್ರಹ ಹಿರಿಯರ ಆಶೀರ್ವಾದ ಇದ್ದಾಗ ಜಗ್ಗಬೇಕಾಗಿಲ್ಲ. ಒಳ್ಳೆಯ ಕಾರ್ಯ ನಡೆಯುವಾಗ ಅಡೆ ತಡೆ ಇದ್ದದ್ದೇ ಆದರೆ ಅದರ ಬಗ್ಗೆ ಹೆಚ್ಚಾಗಿ ಯೋಚಿಸದೇ ದೇವರ ಪಾದಕ್ಕೆ ಅರ್ಪಿಸಬೇಕು. ಸತ್ಯಕ್ಕೆ ಎಂದು ಜಯವಿದ್ದದೇ ಸತ್ಯ ಸನ್ಮಾರ್ಗದಲ್ಲಿ ನಡೆಯುವಾಗ ಎಲ್ಲ ಅಡೆ ತಡೆ ಬಂದರೂ ದೇವರು ನಮ್ಮನ್ನು ಕಾಪಾಡುತ್ತಾರೆ ಎಂದು ನುಡಿದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ ಅವರು ಮಾತನಾಡಿ, ಪಟ್ಲ ಫೌಂಡೇಶನ್ ಕಾರ್ಯ ಅದು ನಿಂತ ನೀರಲ್ಲ ನಿರಂತರ ಹರಿಯುತ್ತಿರುತ್ತದೆ. ಪಟ್ಲ ಫೌಂಡೇಶನ್‌ನ ಸಮಾಜ ಸೇವೆ ಕಾರ್ಯ, ಕಲಾವಿದರಿಗೆ ಬದುಕು ಕಲ್ಪಿಸುವಂತಹ ಕಾರ್ಯ ಸರಾಗವಾಗಿ ಮುಂದುವರಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುರತ್ಕಲ್ ಘಟಕದ ಗೌರವಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಕೋಶಾಧಿಕಾರಿ ಸತೀಶ್ ಶೆಟ್ಟಿ ಬಾಳಿಕೆ, ಸಂಚಾಲಕ ರವಿ ಸುರತ್ಕಲ್, ದೇವೇಂದ್ರ ಕೆ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.
ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸತೀಶ್ ಶೆಟ್ಟಿ ವಂದಿಸಿದರು. ಲೀಲಾಧರ್ ಶೆಟ್ಟಿ ಕಟ್ಲ ಕಾರ್ಯಕ್ರಮ ನಿರೂಪಿಸಿದರು.
Comments are closed.