ಉಡುಪಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತಗಳ ಆದೇಶಗಳನ್ನು ಉಲ್ಲಂಘಿಸಿ ಸಂತೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಹರಕೆಯ ಆಟವಾಗಲಿ, ಯಕ್ಷಗಾನ ಬಯಲಾಟಗಳಾಗಲಿ ನಡೆಸಿದ್ದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾರ್ವಜನಿಕರು ತುರ್ತು ಅಗತ್ಯದ ಹೊರತು ಯಾವುದೇ ಕಾರಣಕ್ಕೂ ಸರಕಾರಿ ಕಚೇರಿಗಳಿಗೆ ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 10, ಜಿಲ್ಲಾಸ್ಪತ್ರೆಯಲ್ಲಿ 10, ಕುಂದಾಪುರ ಹಾಗೂ ಕಾರ್ಕಳ ಆಸ್ಪತ್ರೆಯಲ್ಲಿ ತಲಾ 5 ಐಸೋಲೇಟೆಡ್ ವಾರ್ಡ್ಗಳಿವೆ. ಜತೆಗೆ ಜಿಲ್ಲೆಯ ಎಲ್ಲ ಆಸ್ಪತ್ರೆಯಲ್ಲಿ ಎರಡು ಬೆಡ್ ವಾರ್ಡ್ ತೆರೆಯುವಂತೆ ಸೂಚನೆ ನೀಡಲಾಗಿದೆ. ತುರ್ತು ಚಿಕಿತ್ಸೆ ಬೇಕಾದವರು ಮಾತ್ರ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಉಡುಪಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 21 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. 16 ಮಂದಿಯ ವರದಿ ಬಂದಿದ್ದು, ನೆಗೆಟಿವ್ ಆಗಿವೆ. ಬಾಕಿ ಇರುವ 5 ವರದಿ ಇನ್ನಷ್ಟೇ ಬರಬೇಕಿದೆ. ಮಾ. 19ರಂದು ಹೊಸದಾಗಿ ಕುಂದಾಪುರ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಕಸ್ತುರ್ಬಾ ಆಸ್ಪತ್ರೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಇವರು ಜರ್ಮನಿ, ಯುಎಇ, ದುಬಾೖಯಿಂದ ಬಂದವರಾಗಿದ್ದಾರೆ. ಅವರು ಗಂಟಲ ದ್ರವವನ್ನು ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ಚಂದ್ರ ಸೂಡಾ ತಿಳಿಸಿದರು.
Comments are closed.