ಉಡುಪಿ: ಕೋವಿಡ್-19 (ಕೊರೊನಾ ವೈರಾಣು ಕಾಯಿಲೆ 2019) ಕಾಯಿಲೆ ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ, ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಸದರಿ ಕಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರಕಾರವು ಆದೇಶಿಸಿದ್ದು, ಅದರಂತೆ ಅನುಸರಣಾ ಕ್ರಮಗಳನ್ನು ಸಾರ್ವತ್ರಿಕವಾಗಿ ಪಾಲಿಸುವ ಬಗ್ಗೆ ಈಗಾಗಲೇ ಆದೇಶಗಳನ್ನು ಹೊರಡಿಸಲಾಗಿದೆ, ಮುಂದುವರಿದಂತೆ ಈಗಾಗಲೇ ಮಾಡಲಾಗಿರುವ ಆದೇಶಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಈ ಕೆಳಗಿನಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕೋವಿಡ್-19 ಕಾಯಿಲೆಯ ಬಗ್ಗೆ ನಿಗಾವಹಿಸಿ, ಈ ಬಗ್ಗೆ ಜಾಗೃತವಾಗಿದ್ದು, ಕಾಯಿಲೆ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು.
Home Quarantine ನಲ್ಲಿ ಇರುವವರು ಅವರಿಗೆ ನಿಗಧಿಪಡಿಸಿದ ಅವಧಿಯಲ್ಲಿ ಮನೆಯಲ್ಲಿದ್ದು, ಸಂಪೂರ್ಣಗೊಳಿಸುವಂತೆ ನಿಗಾವಹಿಸಲು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಮತ್ತು ಕಂದಾಯ ನಿರೀಕ್ಷಕರು ಕ್ರಮ ವಹಿಸಬೇಕು ಮತ್ತು ಅವರು ಹೊರ ಹೋಗದಂತೆ ಎಚ್ಚರಿಕೆ ವಹಿಸಬೇಕು. ಅವರು ಹೊರ ಹೋದಲ್ಲಿ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಕರಣಿಕರು ಜವಾಬ್ದಾರರಾಗಿರುತ್ತಾರೆ.
ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಜನ ಸೇರುವ ಯಾವುದೇ ಕಾರ್ಯಕ್ರಮಗಳು ನಡೆಯದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಗ್ರಾಮಕರಣಿಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಯಾವುದೇ ಜನ ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ನೋಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಸಂಬಂಧಪಟ್ಟ ಗ್ರಾಮಕರಣಿಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮೇಲ್ಕಂಡ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ನೋಡಿಕೊಳ್ಳಬೇಕು. ಇದರಲ್ಲಿ ಯಾವುದೇ ಲೋಪಗಳಾದ್ಲಲಿ ಮತ್ತು ಸೆಕ್ಷನ್ 144(3) ರ ಅನುಷ್ಟಾನದಲ್ಲಿ ಯಾವುದೇ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಲೋಪವಾದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನಗರಸಭೆ/ ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಮೇಲ್ಕಂಡ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ನಗರಸಭೆಯ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳು ಮಾಡಬೇಕು. ಇದರಲ್ಲಿ ಯಾವುದೇ ಲೋಪಗಳಾದಲ್ಲಿ ಮತ್ತು ಸೆಕ್ಷನ್ 144(3) ಅನುಷ್ಟಾನದಲ್ಲಿ ಯಾವುದೇ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ.
ನಗರಸಭೆ/ ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿ ಪ್ರದೇಶಗಳ ಬಗ್ಗೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಉಡುಪಿ ಇವರು ನಿರಂತರ ಮೇಲ್ವಿಚಾರಣೆ ನಡೆಸಿ, ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
Comments are closed.