ಮಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ದಂಪತಿಯನ್ನು ಹಾಡುಹಗಲಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದ.ಕ.ಜಿಲ್ಲೆಯ ಕಿನ್ನಿಗೋಳಿ ಏಳಿಂಜೆಯಲ್ಲಿ ಇಂದು ನಡೆದಿದೆ.
ಸಿ.ಆರ್.ಪಿ.ಎಫ್. ನಿವೃತ್ತ ಯೋಧ ಹಾಗೂ ಅವರ ಪತ್ನಿಯನ್ನು ನೆರೆ ಮನೆಯ ಅಲ್ಫೋನ್ಸ್ ಎಂಬಾತ ಹಾರೆ, ಚೂರಿಯಿಂದ ಇರಿದು ಬರ್ಬರ ಹತ್ಯೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತರನ್ನು ವಿನ್ಸೆಂಟ್ ಡಿಸೋಜ (48) ಮತ್ತು ಅವರ ಪತ್ನಿ ಹೆಲಿನ್ ಡಿಸೋಜ (43) ಎಂದು ಗುರುತಿಸಲಾಗಿದೆ. ನೆರೆ ಮನೆಯ ಅಲ್ಫನ್ಸ್ ಸಲ್ಡಾನ (51) ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮರದ ರೆಂಬೆ ಕಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದಿಂದಾಗಿ ಪರಸ್ಪರ ವಾದ ಪ್ರತಿವಾದ ಏರ್ಪಟ್ಟು ಕೊಲೆಯಲ್ಲಿ ಅಂತ್ಯಗೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಅಲ್ಫನ್ಸ್ ಸಲ್ಡಾನ ಪಿಕ್ಕಾಸು ಹಾಗೂ ಹಾರೆಯಿಂದ ವಿನ್ಸೆಂಟ್ ಡಿಸೋಜ ರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದು, ಪತಿಯ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಅವರನ್ನು ರಕ್ಷಿಸಲು ಬಂದ ಪತ್ನಿಯ ಮೇಲೂ ಆರೋಪಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮನೆ ಮುಂಭಾಗದಲ್ಲೇ ಇಬ್ಬರು ಬರ್ಬರವಾಗಿ ಕೊಲೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆಯ ಕುರಿತಂತೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
Comments are closed.