ಕರಾವಳಿ

ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಜಿ.ಜಗದೀಶ್ ಸೂಚನೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ನಲ್ಲಿ , ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆಗಾಲದಲ್ಲಿ ರಾಷ್ಟಿಯ ಹೆದ್ದಾರಿ 66 ರಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವ ಸಾದ್ಯತೆಗಳಿದ್ದು, ಅಂತಹ ಸ್ಥಳಗಳನ್ನು ಕೂಡಲೇ ಗುರುತಿಸಿ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು, ಹೆದ್ದಾರಿಯ ಬದಿಯಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಅಗತ್ಯ ಕ್ರಮ ಕೈಗೊಳ್ಳಿ, ಅಗತ್ಯವಿರುವಡೆಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಿಸುವಂತೆ ಹಾಗೂ ಹೆದ್ದಾರಿಯಲ್ಲಿ ಪಾಟ್ ಹೋಲ್ ಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 166ಎ ರಲ್ಲಿ ಸಹ ಪಾಟ್ ಹೋಲ್ ಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ , ಇಂದ್ರಾಳಿ ರೈಲ್ವೆ ಬಿಡ್ಜ್ ಬಳಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಿ, ರಾಷ್ಟಿಯ ಹೆದ್ದಾರಿ ಸಂಪರ್ಕಿಸುವ ನಗರಸಭೆಯ ರಸ್ತೆಗಳ ಬಳಿ ಸೂಚನಾ ಫಲಕಗಳನ್ನು ಅಳವಡಿಸಿ ಅಪಘಾತಗಳಾಗುವುದನ್ನು ತಡೆಯಿರಿ, ಸಾರ್ವಜನಿಕರಿಗೆ , ವಾಹನ ಸವಾರರಿಗೆ ಯವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಸಂಚರಿಸುವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಂತೆಕಟ್ಟೆಯ ಮಾರುಕಟ್ಟೆಯನ್ನು ಒಂದು ವಾರದ ಒಳಗೆ ಸ್ಥಳಾಂತರಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹಾಗೂ ರಾಷ್ಟಿಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.