ಕರಾವಳಿ

ಅಗಸರು, ಕ್ಷೌರಿಕರು 5 ಸಾವಿರ ಪರಿಹಾರಕ್ಕೆ ಅರ್ಜಿ ಸಲ್ಲಿಸಿ- ಉಡುಪಿ‌ ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಕೋವಿಡ್ 19 ಕಾರಣ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ , ರಾಜ್ಯ ಸರ್ಕಾರದಿಂದ , ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ ರೂ.5000 ನೆರವನ್ನು ಪಡೆಯುವ ಕುರಿತಂತೆ, ಜೂನ್ 30 ರೊಳಗೆ ಜಿಲ್ಲೆಯಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಅರ್ಜಿದಾರರು 18 ರಿಂದ 65 ವರ್ಷಗಳ ವಯೋಮಿತಿಯಲ್ಲಿದ್ದು, ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಪಡೆಯಲು ಅವಕಾಶವಿದ್ದು, ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಅರ್ಜಿ ಸಲ್ಲಿಸುವಾಗ , ಅಗಸ/ಕ್ಷೌರಿಕ ವೃತಿ ನಿರ್ವಹಿಸುತ್ತಿರುವ ಕುರಿತು ನಿಗಧಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪತ್ರ, ನಿಗಧಿತ ನಮೂನೆಯಲ್ಲಿ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು, ಬಿ.ಪಿ.ಎಲ್. ಕಾರ್ಡ್ , ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಸಲ್ಲಿಸಬೇಕು, ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳು ಸಮರ್ಪಕವಾಗಿದ್ದಲ್ಲಿ , ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಪರಿಹಾರವನ್ನು ವರ್ಗಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಉದ್ಯೋಗ ದೃಢೀಕರಣ ಪತ್ರ ಪಡೆಯಲು ನಗರ ಪ್ರದೇಶದಲ್ಲಿ ನಗರಸಭೆ/ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿಗಳು /ಕಂದಾಯ ನಿರೀಕ್ಷಕರು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಗಳು, ಉಪ ತಹಸೀಲ್ದಾರ್ ಗಳು, ಕಂದಾಯ ನಿರೀಕ್ಷಕರು , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು/ಕಾರ್ಯದರ್ಶಿಗಳು ಮತ್ತು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಅಮರೇಂದ್ರ , ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಕ್ಷೌರಿಕ ಮತ್ತು ಅಗಸ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.