ಕಾರವಾರ (ಜು.9):ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಕಾರವಾರ, ಅಂಕೋಲಾ ಭಾಗದಲ್ಲಿ ಪ್ರವಾಹ ಬಂದೊದಗಿದೆ. ಏಕಾಏಕಿ ಸುರಿದ ಮಳೆ ಭಾರೀ ಪ್ರಮಾಣದಲ್ಲಿ ಅವಾಂತರ ಸೃಷ್ಟಿಸಿದೆ. ಅಂಕೋಲಾ ತಾಲೂಕಿನ ಅವರ್ಸಾ, ಹಟ್ಟಿಕೇರಿ, ಕೇಣಿ, ಹಾರವಾಡ ಹೀಗೆ ವಿವಿಧ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮನೆಯಲ್ಲಿ ಇದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಮಳೆ ನೀರಿಗೆ ತೋಯ್ದು ಕೆಟ್ಟು ಹೋಗಿವೆ.
ನದಿಯಂತಾದ ಗ್ರಾಮದಲ್ಲಿ ಮುಳುಗುವ ಸ್ಥಿತಿಯಲ್ಲಿ ಇದ್ದ ಮನೆ ಸದಸ್ಯರನ್ನ ಸುರಕ್ಷಿತ ಸ್ಥಳಕ್ಕೆ ತರಲು ದೋಣಿಯನ್ನ ಬಳಸಲಾಗಿದೆ. ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ತರಲಾಯಿತು. ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ.
ನಾಲ್ಕು ಘಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ಬಂದ್:
ರಾಷ್ಟ್ರೀಯ ಹೆದ್ದಾರಿಯ66ಅನ್ನು ಚತುಷ್ಪತ ಮಾಡಲಾಗುತ್ತಿದೆ. ಇದರ ಕಾಮಗಾರಿಯ ಕೆಲಸದಿಂದ ಕಾರವಾರ ತಾಲೂಕಿನ ಮುದಗಾ ಬಳಿ ರಸ್ತೆಯಲ್ಲಿ ನೀರು ತುಂಬಿ ಸುಮಾರು ನಾಲ್ಕೈದು ಘಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಗುಡ್ಡದಿಂದ ಬಂಡೆಕಲ್ಲು ರಸ್ತೆಗೆ ಉರುಳಿ ಕೆಲಹೊತ್ತು ರಸ್ತೆ ಸಂಚಾರ ಮತ್ತೆ ಸ್ಥಗಿತವಾಯಿತು. ಎಡಬಿಡದೆ ಸುರಿದ ಭಾರೀ ಮಳೆಗೆ ಬೆಟ್ಟದಷ್ಟು ಸಮಸ್ಯೆ ಒಂದೆ ದಿನದಲ್ಲಿ ಉಲ್ಬಣಿಸಿತು.
ನೋಡ ನೋಡುತ್ತಿದ್ದಂತೆ ಮನೆಗೆ ನುಗ್ಗಿದ ನೀರು:
ಏಕಾಏಕಿ ಮನೆಗೆ ನೀರು ನುಗ್ಗಿದ ಪರಿಣಾಮ ಜನರು ಜೀವ ಉಳಿಸಿಕೊಳ್ಳಲು ಕಷ್ಟ ಪಡುವಂತಾಗಿತ್ತು. ಸ್ಥಳಕ್ಕೆ ಸ್ಥಳೀಯ ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ನಡೆಸಿ ಪ್ರವಾಹಕ್ಕೆ ಸಿಕ್ಕ ಜನರನ್ನ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಸ್ಥಳೀಯರು ಕೂಡಾ ಕೈ ಜೋಡಿಸಿ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.ಮಳೆ ನಿರಂತರವಾಗಿದ್ದು ಇನ್ನಷ್ಟು ಆವಾಂತರ ಸೃಷ್ಟಿಸುವ ಆತಂಕ ಎದುರಾಗಿದೆ. ಮನೆಯಲ್ಲಿ ಇದ್ದ ಸಾಮಾನು ಸರಂಜಾಮು ಬಿಟ್ಟು ಜೀವ ತಪ್ಪಿಸಿಕೊಂಡರೆ ಸಾಕು ಎಂದು ಜನ ಓಡೋಡಿ ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕೆಲವೆಡ ಮರ ಬಿದ್ದು ಹಾನಿ
ಮಳೆ ಮತ್ತು ಗಾಳಿಗೆ ಭಾರೀ ಪ್ರಮಾಣದಲ್ಲಿ ಹಾನಿ ಆಗಿದೆ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಹಾನಿ ಆಗಿರುವ ಬಗ್ಗೆ ವರದಿ ಆಗಿದೆ. ಜತೆಗೆ ಮನೆಗೆ ನೀರು ನುಗ್ಗಿ ಜನ ಸುರಕ್ಷಿತ ಸ್ಥಳಕ್ಕೆ ಹೋಗಲಾಗದೆ ಪರದಾಟ ನಡೆಸಿದ ಸ್ಥಿತಿ ಎದುರಾಯಿತು. ಒಟ್ಟಿನಲ್ಲಿ ಇವತ್ತು ಸುರಿದ ಭಾರಿ ಮಳೆ ಪ್ರವಾಹ ತಂದೊಡ್ಡಿ ಜನ ಜೀವನ ಅಸ್ತವ್ಯಸ್ತಮಾಡಿದೆ.
Comments are closed.