ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡು ಬರೋಬ್ಬರಿ ಒಂದೂವರೆ ತಿಂಗಳು ಕಳೆಯಿತು. ಈ ಭಾರೀ ಸುರಿದ ಭಾರೀ ವರ್ಷಧಾರೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜಲಪಾತಗಳನ್ನು ಸೃಷ್ಟಿಸಿದೆ. ಈ ಜಲಪಾತಗಳ ಬೋರ್ಗರೆತದ ಸೊಬಗಿನ ವೀಕ್ಷಣೆ, ಈಜುವುದೇ ಎಲ್ಲರಿಗೂ ಪರಮಾನಂದ. ಆದರೆ ಈ ಎಲ್ಲ ಮೋಜು-ಮಸ್ತಿಯನ್ನು ಈ ಬಾರಿ ಕೊರೋನಾ ಕಸಿದುಕೊಂಡಿದೆ.
ಜಲಪಾತಗಳ ತವರು ಖ್ಯಾತಿಯ ಉತ್ತರ ಕನ್ನಡದಲ್ಲಿ ಮಳೆಗಾಲದಲ್ಲಿ ನೂರಾರು ಜಲಪಾತಗಳು ಸೃಷ್ಟಿಯಾಗುತ್ತವೆ. ಪ್ರಸಿದ್ಧ ಜಲಪಾತಗಳ ಹೊರತಾಗಿ ಮಳೆಗಾಲದ ಸೀಸನ್ನಲ್ಲಿ ಜಲಝರಿಗಳ ಸಂಖ್ಯೆ ಹೆಚ್ಚಾಗುತ್ತವೆ. ತಾಲೂಕಿನಲ್ಲಿ ಗೊಲ್ಲಾರಿ, ನಾಗರಮಡಿ, ಅಣಶಿ, ಜಾಂಬಾ, ನೇತ್ರಹಳ್ಳ, ಅಚ್ಚಕನ್ಯೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ಈ ಬಾರಿ ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಜುಲೈ ತಿಂಗಳಿನಲ್ಲಿ ಕುಟುಂಬ ಸಮೇತ ಪಿಕ್‌ನಿಕ್ ತೆರಳುವವರು, ಸ್ನೇಹಿತರೊಂದಿಗೆ ಸುತ್ತಾಡಲು ಹೋಗುವವರು ಈಗ ಕಾಣೆಯಾಗಿದ್ದಾರೆ. ಜತೆಗೇ ಟ್ರಕ್ಕಿಂಗ್ ಪ್ರಿಯರು, ಪ್ರಕೃತಿ ಸೌಂದರ್ಯ ಆರಾಧಕರು ಇಲ್ಲದೆ ಎಲ್ಲ ಜಲಪಾತಗಳು ಬಿಕೋ ಎನ್ನುತ್ತಿವೆ.
ಮಳೆಯ ಆರ್ಭಟ ಜೋರಾಗಿ ಜಲಪಾತಗಳು ಮೈದುಂಬಿ ಹರಿಯತೊಡಗಿದ್ದರೂ ಅಲ್ಲಿಗೆ ತೆರಳಲು ಜನರೇ ಹಿಂದೇಟು ಹಾಕಲು ಕೊರೋನಾ ಕಾರಣವಾಗಿದೆ. ಕೆಲವರು ಅಂಜಿಕೆ ಬಿಟ್ಟು ಮೋಜಿಗಾಗಿ ತೆರಳಿದ್ದರೂ, ಬಹುಪಾಲು ಮಂದಿ ಝರಿಗಳತ್ತ ಧಾವಿಸಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯಲ್ಲಿ ನೆನೆದು ಜ್ವರ, ನೆಗಡಿಯಾದರೆ ಆಸ್ಪತ್ರೆ ಸೇರಬೇಕೆಂಬ ಭಯವೇ ಜಲಪಾತಗಳಿಂದ ಜನರನ್ನು ದೂರ ಮಾಡಿದೆ ಎಂಬ ಅಭಿಪ್ರಾಯವಿದೆ. ಅಲ್ಲದೆ ರವಿವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಲಪಾತಗಳತ್ತ ಧಾವಿಸಲು ಮುಂದಾಗುತ್ತಿದ್ದು, ವಾರಾಂತ್ಯದಲ್ಲಿ ಲಾಕ್‌ಡೌನ್ ಘೋಷಿಸಿದ್ದು ಮೋಜಿಗೆ ಅಡ್ಡಿಯಾಗಿದೆ.
ಪ್ರತಿ ವರ್ಷ ಮಳೆಗಾಲದ ವಾರಾಂತ್ಯಗಳಲ್ಲಿ ಜಲಪಾತಗಳ ಬಳಿ ಜನಸಾಗರವೇ ನೆರೆಯುತ್ತಿತ್ತು. ಸೀಸನ್ ಜಲಪಾತಗಳಿಗಂತೂ ಜನರು ಮುತ್ತಿಗೆ ಹಾಕಿದಂತೆ ತೆರಳುತ್ತಿದ್ದರು. ಆದರೆ ಇವೆಲ್ಲ ಸಡಗರಕ್ಕೆ ಕೊರೋನಾ ಅಡ್ಡಗಾಲಿಟ್ಟು ನಿಂತಿದೆ. ಜಲಪಾತಗಳಿರುವ ಪ್ರದೇಶಗಳ ಜನರು ಈ ಬಾರಿ ಜಲಪಾತಗಳ ವೀಕ್ಷಣೆಗೆ ಹೊರಗಿನಿಂದ ಜನ ಬರುವುದನ್ನು ತಡೆಯಲು ಮುಂದಾಗಿದ್ದಾರೆ. ಗ್ರಾಮ ಅರಣ್ಯ ಸಮಿತಿಗಳ ವತಿಯಿಂದ ಜಲಪಾತಗಳ ಬಳಿ ಜನರು ತೆರಳದಂತೆ ಸ್ವಯಂ ಸೇವಕರನ್ನು ನಿಲ್ಲಿಸಲಾಗುತ್ತಿದೆ. ಅರಣ್ಯ ಇಲಾಖೆಯವರೂ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಸುರಕ್ಷತೆಯೇ ಮುಖ್ಯ, ಅಧಿಕಾರಿಗಳು ಏನಂತಾರೆ?ಸುರಕ್ಷತೆ ಹಿತದೃಷ್ಟಿಯಿಂದ ನಾಗರಮಡಿ, ಗೊಲ್ಲಾರಿ ಮುಂತಾದ ಜಲಪಾತಗಳಿಗೆ ಜನರು ಬರುವುದನ್ನು ನಿಯಂತ್ರಿಸಲು ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳು ನಿರ್ಧರಿಸಿವೆ. ಗ್ರಾಮಸ್ಥರ ನಿರ್ಧಾರಕ್ಕೆ ಅರಣ್ಯ ಇಲಾಖೆಯಿಂದಲೂ ನೆರವು ನೀಡುತ್ತಿದ್ದು ಜಲಪಾತಗಳ ಬಳಿ ಜನರು ಬರದಂತೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
Comments are closed.